ಒಕ್ಕಲಿಗ ಸಮುದಾಯದ ಬಗ್ಗೆ ಪದೇ ಪದೇ ಲಘುವಾಗಿ ಹೇಳಿಕೆ ನೀಡುತ್ತಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡಲೇ ಸಮುದಾಯದ ಜನರಲ್ಲಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಅವರಿಗೆ ಹಾಗೂ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಪಿ.ನಾಗೇಶ್ ಎಚ್ಚರಿಕೆ ನೀಡಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿ ಅವರು ಮಾತನಾಡಿದರು.
ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಆಗುವ ಅವಕಾಶವಿದ್ದು, ಹೀಗಾಗಿ ನನಗೊಂದು ಅವಕಾಶ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿಕೊಂಡಿದ್ದರು. ಅದನ್ನು ಗುರಿಯಾಗಿಸಿಕೊಂಡು ಒಕ್ಕಲಿಗರ ಸಮುದಾಯದ ಬಗ್ಗೆ ಜಮೀರ್ ಅವರು ಲಘುವಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಒಕ್ಕಲಿಗ ಸಮುದಾಯಕ್ಕಿಂತ ಮುಸಲ್ಮಾನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ನಮಗೇ ಸಿಎಂ ಸ್ಥಾನ ಸಿಗಬೇಕು ಎಂದು ಹೇಳುವ ಮೂಲಕ ಸಮುದಾಯದ ಬಗ್ಗೆ ಲೇವಡಿ ಮಾಡಿರುವುದು ಸರಿಯಲ್ಲ.
ಮುಸ್ಲಿಂರು ಮತ್ತು ಒಕ್ಕಲಿಗರು ಅನ್ಯೋನ್ಯವಾಗಿದ್ದು, ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು. ಕೂಡಲೇ ಜಮೀರ್ ಅಹ್ಮದ್ ಒಕ್ಕಲಿಗ ಸಮುದಾಯ ಹಾಗೂ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ರವಿ ಕಂಸಾಗರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಡಿ, ಎಸಿಬಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮೇಲೆ ದಾಳಿ ಮಾಡುತ್ತಿರುವುದರಿಂದ ಜನರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದಕೊಂಡು ಅವರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದು, ರಾಜ್ಯ ಒಕ್ಕಲಿಗ ಸಮುದಾಯ ಸ್ವಾಭಿಮಾನದ ಸಂಕೇತವಾಗಿದ್ದು, ತಮ್ಮದೇ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿದೆ. ನಮ್ಮ ಸಮುದಾಯವನ್ನು ಬೇರೆ ಸಮುದಾಯಕ್ಕೆ ತುಲನೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಟೀಕಿಸಿದರು.
ಮುಖಂಡರಾದ ದೇವರಾಜು, ರುದ್ರಣ್ಣ, ಎಂ.ಎನ್.ಮಹೇಶ್ ಕುಮಾರ್, ಶಿವಮಾದೇಗೌಡ, ನೇಗಿಲಯೋಗಿ ಕೃಷ್ಣೇಗೌಡ, ಹಂಚೀಪುರ ಪ್ರಸನ್ನ ಇದ್ದರು.




