ರಾಜ್ಯ ಸರ್ಕಾರವು ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸುವ ಮೂಲಕ ಭವಿಷ್ಯನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ರಿ)ಆಗ್ರಹಿಸಿದೆ.
ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ನೂರಾರು ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯದಾದ್ಯಂತ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಸ್ತ್ರೀ – ಪುರುಷರಿಗೆ ಜೀವನ ಭದ್ರತೆ ಒದಗಿಸಲು ಟೈಲರ್ ಕ್ಷೇಮನಿಧಿ ಮಂಡಳಿ ರಚಿಸುವಂತೆ ಕಳೆದ 22 ವರ್ಷಗಳಿಂದ ಮನವಿ ಹಾಗೂ ಶಾಂತ ರೀತಿಯ ಚಳುವಳಿಗಳ ಮುಖೇನ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ ಸರ್ಕಾರ ಕ್ಷೇಮನಿಧಿ ಮಂಡಳಿ ರಚಿಸಿಲ್ಲ.ಕೂಡಲೇ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದರು.
ಭವಿಷ್ಯ ಪಿಂಚಣಿ ಯೋಜನೆ , ಆರೋಗ್ಯ ವಿಮೆ ಜಾರಿ,60 ವರ್ಷ ತುಂಬಿದ ಎಲ್ಲಾ ನಿವೃತ್ತ ಟೈಲರ್ ಗಳಿಗೆ ಮಾಸಿಕ 3,000 ನಿವೃತ್ತಿ ವೇತನ ನೀಡಬೇಕೆಂದು ಆಗ್ರಹಿಸಿದರು.
ಮಹಿಳಾ ಹೊಲಿಗೆ ಕೆಲಸಗಾರರಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ, ಸ್ವಂತ ಮನೆ ಖರೀದಿಸಲು, ಮನೆ ಕಟ್ಟಲು ಮತ್ತು ಪುನರ್ನಿರ್ಮಾಣ ಮಾಡಲು ಧನ ಸಹಾಯ ಮತ್ತು ಕಡಿಮೆ ಬಡ್ಡಿಯ ಸಾಲ,ಹೊಲಿಗೆ ಕೆಲಸಗಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ಬೇಡಿಕೆಗಳ ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್,ನಗರ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಟೈಲರ್ ಅಸೋಸಿಯೇಷನ್ ಅಧ್ಯಕ್ಷ
ಟಿ.ಎನ್.ಹರ್ಷ ಪೇಟ್ಕರ್,ಉಪಾಧ್ಯಕ್ಷರಾದ ತಿಮ್ಮೇಗೌಡ,ಉಮೇಶ್ ಕುಮಾರ್,ಪ್ರಧಾನ ಕಾರ್ಯದರ್ಶಿ ಪುನೀತ್ ಕುಮಾರ್, ಖಜಾಂಚಿ ರಫೀಕ್ ಅಹಮದ್, ಹೆಚ್.ಕೆ.ಮಂಜುನಾಥ್, ಅಧ್ಯಕ್ಷರು ಕೆ.ಆರ್.ಪೇಟೆ, ಪರಮೇಶ್ ಎಸ್. ಅಧ್ಯಕ್ಷರು ಮಳವಳ್ಳಿ,
ಸುಶೀಲ್ ಕುಮಾರ್, ಅಧ್ಯಕ್ಷರು ಕಿರುಗಾವಲು, ಮಲ್ಲರಾಜ್ ಅರಸ್ ಅಧ್ಯಕ್ಷರು ಕೆ.ಎಂ.ದೊಡ್ಡಿ ಸೇರಿದಂತೆ ಮಂಡ್ಯ ಜಿಲ್ಲೆಯ ಸಹಸ್ರಾರು ಟೈಲರ್ ವೃತ್ತಿ ಬಾಂಧವರು ಭಾಗವಹಿಸಿದ್ದರು.




