ಪಾಕಿಸ್ತಾನ ಒಪ್ಪಂದ ಮುರಿದು 200 ಕಿ.ಮಿ. ವರೆಗೂ ಕಾರ್ಗಿಲ್ ಪ್ರದೇಶವನ್ನು ಆಕ್ರಮಿಸಿಕೊಂಡ ಪರಿಣಾಮ ಭಾರತ ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಸರಿಯಾದ ಪಾಠ ಕಲಿಸಿತು ಎಂದು ಪ್ರಾಧ್ಯಾಪಕ ಮನುಕುಮಾರ್ ತಿಳಿಸಿದರು.
ಮಂಡ್ಯ ನಗರದ ಗುತ್ತಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವಕೇಂದ್ರ, ಅನನ್ಯ ಹೆಲ್ತ್ ಎಜುಕೇಷನ್, ಬಾಲಕಿಯರ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ‘ಕಾರ್ಗಿಲ್ ವಿಜಯೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಸಿಯಾಚಿನ್‌ನಲ್ಲಿ ರಕ್ತವೇ ಹೆಪ್ಪುಗಟ್ಟುವಷ್ಟು ಕೊರೆಯುವ ಚಳಿಯಿರುತ್ತದೆ. ಹಾಗಾಗಿ ಪಾಕಿಸ್ತಾನ ಮತ್ತು ಭಾರತ ಒಂದು ಒಪ್ಪಂದಕ್ಕೆ ಬಂದು, ಸೈನಿಕರ ಆರೋಗ್ಯ ದೃಷ್ಟಿಯಿಂದ ಗಡಿ ಕಾಯುವುದನ್ನು ಡಿಸೆಂಬರ್‌ನಿಂದ ಏಪ್ರಿಲ್ ವರೆಗೆ ಮಾಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಎರಡೂ ದೇಶಗಳು ಬರುತ್ತವೆ. ಆದರೆ ಪಾಕಿಸ್ತಾನದವರು ನಾಟಕವಾಡಿ ಈ ಸಮಯದಲ್ಲಿ ಸುಮಾರು 200 ಕಿ.ಮೀಟರ್ ವರೆಗೂ ಭಾರತದ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುತ್ತಾರೆ.
ಆಗ ಭಾರತದ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ವಶಪಡಿಸಿಕೊಂಡುಬಸರಿಯಾದ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು. ದೇಶದಲ್ಲಿ ಸೈನಿಕರ ಸೇವೆ ಅನನ್ಯವಾದುದು, ಮಣ್ಣಿನ ಋಣ ತೀರಿಸಲು ಸಾಧ್ಯವಿಲ್ಲ ಎಂಬಂತೆ ಸೈನಿಕರ ಋಣವನ್ನು ತೀರಿಸಲು ಆಗುವುದಿಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು.
ಗುರುವಿನ, ತಂದೆ-ತಾಯಿಯ ಋಣದಷ್ಟೇ ಸೈನಿಕರ ಋಣವು ಮುಖ್ಯವಾಗುತ್ತದೆ. ಏಕೆಂದರೆ, ನಾವು ನೆಮ್ಮದಿಯಾಗಿ ಜೀವನ ನಡೆಸುತ್ತಿರುವುದಕ್ಕೆ ಸೈನಿಕರ ಸಿಂಹಪಾಲು ಹೆಚ್ಚಿದೆ. ಸ್ವಾತಂತ್ರ್ಯ ನಂತರ ಹಲವು ಯುದ್ಧಗಳು ನಡೆದಿವೆ, ಅದರಲ್ಲಿ 1999ರಲ್ಲಿ ಕಾರ್ಗಿಲ್ ಯುದ್ಧವು ಒಂದು. ಇದರಲ್ಲಿ ಭಾರತ ಜಯಶೀಲವಾಗಿ, ನಮ್ಮ ಸಿಯಾಚಿನ್ ಅನ್ನು ಪಡೆದುಕೊಂಡೆವು ಎಂದರು.
ಇದೇ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಮೇಣದ ಬತ್ತಿ ಹೊತ್ತಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು, ಆರೋಗ್ಯ ಇಲಾಖೆಯ ತಿಮ್ಮರಾಜು, ಉಪನ್ಯಾಸಕರಾದ ಹನುಮಂತಯ್ಯ, ಸ್ವಾಮಿ, ಕೃಷ್ಣೇಗೌಡ, ರವಿಶಂಕರ್, ಅನನ್ಯ ಆರ್ಟ್ಸ್ ಸಂಸ್ಥೆಯ ಅಧ್ಯಕ್ಷೆ ಬಿ.ಎಸ್.ಅನುಪಮಾ ಸೇರಿದಂತೆ ಇತರರು ಭಾಗವಹಿಸಿದ್ದರು.




