75ನೇ ಸ್ವಾತಂತ್ರ್ಯೋತ್ಸವ ದಿನದೊಳಗಾಗಿ ತಾಲ್ಲೂಕು ಕ್ರೀಡಾಂಗಣದ ಸಂಪೂರ್ಣ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಾಕೀತು ಮಾಡಿದರು.
50 ಲಕ್ಷ ರು. ವೆಚ್ಚದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದ ಮೇಲ್ಚಾವಣಿ ಹಾಗೂ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು ಆಗಸ್ಟ್ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಜೊತೆಗೆ ಉತ್ತಮ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
75ನೇ ಸ್ವಾತಂತ್ರೋತ್ಸವದ ಅಂಗವಾಗಿ ದೇಶದೆಲ್ಲೆಡೆ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕು ಕ್ರೀಡಾಂಗಣ ಸಹ ಸಂಪೂರ್ಣವಾಗಿ ದುರಸ್ತಿಗೊಳ್ಳುತ್ತಿದೆ. ಕ್ರೀಡಾಂಗಣ ದುರಸ್ತಿ ಸಂಬಂಧ ಇಂಜಿನಿಯರ್ ಅವರೊಂದಿಗೆ ತಾಂತ್ರಿಕ ಚರ್ಚೆಗಳಾಗಬೇಕಿದ್ದು, ಅಗತ್ಯ ಬಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ಕೊಡುವುದಾಗಿ ತಿಳಿಸಿದರು.




