Saturday, November 21, 2026

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಗೂಂಡಾಗಿರಿಗೆ ಪ್ರತಿಷ್ಠಿತರ ಕುಮ್ಮಕ್ಕು ; ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂತುಹಾಕಲಾಗಿದ್ದ ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಧರ್ಮಸ್ಥಳದ ಪ್ರತಿಷ್ಠಿತ ಕೈವಾಡದಿಂದ ಕೆಲವು ಕಿಡಿಗೇಡಿಗಳು ಗೂಂಡಾಗಿರಿ ನಡೆಸಿದ್ದು, ಅಂತಹವರನ್ನು ಕೂಡಲೇ ಬಂಧಿಸಿ, ಮುಕ್ತ ಎಸ್ಐಟಿ ತನಿಖೆಗೆ ಅವಕಾಶ ಮಾಡಿಕೊಡಬೇಕೆಂದು ಮಂಡ್ಯ ಜಿಲ್ಲಾ ಅತ್ಯಾಚಾರಿ ವಿರೋಧಿ ಆಂದೋಲನ ಒತ್ತಾಯಿಸಿದೆ.

ಸಂಘಟನೆಯ ಮುಖಂಡರು ಗುರುವಾರ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಧರ್ಮಸ್ಥಳದ ಹಲವು ಪ್ರದೇಶಗಳಲ್ಲಿ ದೂರುದಾರ ಗುರುತಿಸಿರುವ ಸ್ಥಳಗಳಲ್ಲಿ ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ ಹಲವಾರು ಕಳೇಬರಗಳು ಎಸ್‌ಐಟಿ ಅಧಿಕಾರಿಗಳಿಗೆ ದೊರೆತಿವೆ. ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಹಲವರನ್ನು ಹತ್ಯೆ ಮಾಡಿ, ರಹಸ್ಯವಾಗಿ ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿವೆ. ದೂರುದಾರ ಹೇಳಿರುವಂತೆ ಹೂತುಹಾಕಲಾಗಿರುವ ಮೃತದೇಹಗಳಲ್ಲಿ ಹೆಚ್ಚಿನ ಶವಗಳು ಮಹಿಳೆಯರು ಮತ್ತು ಹೆಣ್ಣುಮಕ್ಕಳದ್ದಾಗಿವೆ. ಹೀಗಾಗಿ ಸೌಜನ್ಯ ಪ್ರಕರಣ ಮತ್ತು ಅನನ್ಯಭಟ್ ಪ್ರಕರಣಗಳನ್ನು ಗಮನಿಸಿದರೆ, ಹೂತುಹಾಕಲಾಗಿರುವ ಮಹಿಳೆಯರನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂಬ ಅನುಮಾನ ರಾಜ್ಯಾದ್ಯಂತ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಇಂತಹ ಗಂಭೀರ ಪ್ರಕರಣದ ತನಿಖೆಯ ಕುರಿತು ವರದಿಗೆ ಹೋಗಿದ್ದ ನಾಲ್ವರು ಯೂಟ್ಯೂಬರ್‌ಗಳಾದ ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಮತ್ತೋರ್ವನ ಮೇಲೆ ಬುಧವಾರ ಧರ್ಮಸ್ಥಳದ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪ್ರಕರಣದ ವರದಿ ಮಾಡದಂತೆ ತಡೆಯಲು ದೌರ್ಜನ್ಯ ಎಸಗಿದ್ದಾರೆ. ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಯೂಟ್ಯೂಬ್ ವರದಿಗಾರರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಈ ಘಟನೆಯ ಹಿಂದೆ ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬವೊಂದರ ಕುಮ್ಮಕ್ಕಿದೆ ಎಂದು ಹೇಳಲಾಗುತ್ತಿದೆ. ಬುಧವಾರ ಸಂಜೆ ವೈರಲ್ ಆದ ವಿಡಿಯೋದಲ್ಲಿ, ಆ ಪ್ರತಿಷ್ಠಿತ ಕುಟುಂಬದ ಬೆಂಬಲಿಗರ ದಾಂಧಲೆಯನ್ನು ತಡೆಯಲು ಪೊಲೀಸರು ಯತ್ನಿಸಿದ್ದು, ಈ ವೇಳೆ, ಆ ದಾಂಧಲೆಕೋರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿರುವುದು ಕಂಡುಬಂದಿದೆ. ಆದ್ದರಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಗೂಂಡಾಗಳ ದಾಂಧಲೆ ಮತ್ತು ಹಲ್ಲೆಗಳು ಪ್ರಕರಣದ ತನಿಖೆಗೆ ಅಡ್ಡಿಯುಂಟು ಮಾಡುವ ಉದ್ದೇಶದಿಂದಲೇ ನಡೆದಿದೆ. ಗೂಂಡಾಗಳನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

23 ವರ್ಷಗಳ ಹಿಂದೆ ವಿದ್ಯಾರ್ಥಿನಿ ಅನನ್ಯ ಭಟ್, 13 ವರ್ಷಗಳ ಹಿಂದೆ ಯುವತಿ ಸೌಜನ್ಯ ಸೇರಿದಂತೆ ಹಲವಾರು ಹೆಣ್ಣುಮಕ್ಕಳು ಧರ್ಮಸ್ಥಳದಲ್ಲಿ ಅಪಹರಣ, ಅತ್ಯಾಚಾರ ಹಾಗೂ ಕೊಲೆಗೆ ಬಲಿಯಾಗಿದ್ದಾರೆ. ಈ ಕೃತ್ಯಗಳ ಹಿಂದೆ ಧರ್ಮಸ್ಥಳದ ಸಿರಿವಂತ ಕುಟುಂಬದ ಕೈವಾಡವಿದೆ ಎಂಬ ಗಂಭೀರ ಆರೋಪಗಳು ದಶಕಗಳಿಂದ ಕೇಳಿಬರುತ್ತಿವೆ. ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಬೇಕು. ಆದಷ್ಟು ಬೇಗ ಅಪರಾಧಿಗಳನ್ನು ಬಂಧಿಸಿ, ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅತ್ಯಾಚಾರ ವಿರೋಧಿ ಆಂದೋಲನದ ಮುಖಂಡರಾದ ಪೂರ್ಣಿಮಾ, ಕೃಷ್ಣಪ್ರಕಾಶ್, ನ್ಯಾಯವಾದಿ ಬಿ.ಟಿ.ವಿಶ್ವನಾಥ್, ಜಾಗೃತ ಕರ್ನಾಟಕದ ಮುಖಂಡ ಎನ್.ನಾಗೇಶ್, ನಗರಕೆರೆ ಜಗದೀಶ್, ಶಿಲ್ಪಾ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ