ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆಗೆ ಸೇರಿರುವ 27.39 ಎಕರೆ ಜಮೀನು ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳ ಪಾಲಾಗಿದ್ದು,ಈ ಆಸ್ತಿಗಳ ಅಕ್ರಮ ಒತ್ತುವರಿ ತೆರವಿಗೆ ದಿಟ್ಟ ನಿರ್ಧಾರ ಕೈಗೊಳ್ಳುವ ಸೂಕ್ತ ನಿರ್ಧಾರಕ್ಕೆ ಆಡಳಿತ ಮಂಡಳಿ ಮುಂದಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆಗೆ ಸೇರಿದ 27.30 ಎಕರೆ ಜಮೀನಿನ ಪೈಕಿ 8.30 ಎಕರೆ ವಾಣಿಜ್ಯ ಬಳಕೆಗೆ ಹಾಗೂ 19.09 ಎಕರೆ ವ್ಯವಸಾಯದ ಬಳಕೆಗೆ ಒಳಪಟ್ಟಿದ್ದು, ಅನುಭವದಾರರಾಗಿರುವ ವ್ಯಕ್ತಿಗಳಿಗೆ ಈಗಾಗಲೇ ಅಗತ್ಯ ದಾಖಲೆ ಲಭ್ಯವಿದ್ದರೆ ಸಾಬೀತು ಪಡಿಸುವಂತೆ ಇಲ್ಲದಿದ್ದರೆ ಬಾಡಿಗೆ ಪಾವತಿಸಿ ಆಸ್ತಿ ಬಳಕೆಗೆ ಮುಂದಾಗುವಂತೆ ಸೂಚಿಸಲಾಗಿದ್ದು, ಇಲ್ಲದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಮೈಷುಗರ್ ಕಾರ್ಖಾನೆ ಸರ್ಕಾರ ಮತ್ತು ಷೇರುದಾರರ ಆಸ್ತಿಯಾಗಿದ್ದು, ಆಸ್ತಿ ಕಬಳಿಕೆ ಹಿಂಪಡೆಯಲು ಯಾವುದೇ ಒತ್ತಡ ಎದುರಾದರೂ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನಧಿಕೃತ ಸಾಗುವಳಿದಾರರು ಯಾರ್‍ಯಾರು ?
ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮದ ಉದ್ಯಮಿ ಮಹೇಶ್ ಬಿನ್ ಲೇಟ್ ಪುಟ್ಟಯ್ಯ ಅವರ ಒಡೆತನದ ಶಾಲಾ ಸಂಕಿರ್ಣ 3.33 ಎಕರೆ.
ಮಂಡ್ಯ ನಗರದ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆ ಕಾಳಿಕಾಂಬ ಟ್ರಸ್ಟ್ 0.20 ಗುಂಟೆ.
ಹೊನ್ನಯ್ಯ ಬಡಾವಣೆಯ 2.37 ಎಕರೆ ಜಮೀನು ವಾಣಿಜ್ಯ ಬಳಕೆ
ತಗ್ಗಹಳ್ಳಿ ಗ್ರಾಮದ ಜಯರಾಮು 2 ಎಕರೆ
ಹೊಳಲು ಗ್ರಾಮದ ಕುಚೇಲ 3.04 ಎಕರೆ.
ಶಿವಳ್ಳಿ ಕೃಷ್ಣ ಹಾಗೂ ಇತರರು 7.17 ಎಕರೆ.
ಮಂಡ್ಯ ತಾಲ್ಲೂಕಿನ ಭೀಮನಹಳ್ಳಿಯ ಚನ್ನಮ್ಮ ಕೋಂ ಲೇಟ್ ಕರಿಯ ಇತರರು6 ಎಕರೆ.
ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿಯ ರಾಜೀ ಮರಿಯಯ್ಯ 1.10 ಎಕರೆ.
ಸಂಪಹಳ್ಳಿ ಕುಮಾರ್ ಬಿನ್ ಪುಟ್ಟೇಗೌಡ 0.15 ಗುಂಟೆ.
ಹೊಳಲು ಗ್ರಾಮದ ನಿಂಗರಾಜಮ್ಮ 0.10 ಗುಂಟೆ.
ಚಿಕ್ಕಮಂಡ್ಯ ಗ್ರಾಮದ ಚಿಕ್ಕತಾಯಮ್ಮ ಕೋಂ ನರಸೇಗೌಡ 0.13 ಗುಂಟೆ ಜಮೀನಿನಲ್ಲಿ ಅನಧಿಕೃತ ಸಾಗುವಳಿಯಲ್ಲಿದ್ದಾರೆಂದು ಗಂಗಾಧರ್ ಲಿಖಿತ ಮಾಹಿತಿ ನೀಡಿದರು.
ಸಕ್ಕರೆ ಮಾರಾಟಕ್ಕೆ ಕ್ರಮ
ಮೈಷುಗರ್ ಕಾರ್ಖಾನೆಯಲ್ಲಿ ಪ್ರಸ್ತುತ 40 ಸಾವಿರ ಕ್ವಿಂಟಾಲ್ ಸಕ್ಕರೆ ದಾಸ್ತಾನಾಗಿದ್ದು ಕೇಂದ್ರ ಸಕ್ಕರೆ ಸಚಿವರನ್ನು ಭೇಟಿ ಮಾಡಿದ ಫಲವಾಗಿ ಹೆಚ್ಚುವರಿಯಾಗಿ 25 ಸಾವಿರ ಕ್ವಿಂಟಾಲ್ ಸಕ್ಕರೆ ಮಾರಾಟಕ್ಕೆ ಅನುಮತಿ ದೊರೆತಿದ್ದು, 28,340 ಕ್ವಿಂಟಾಲ್ ಸಕ್ಕರೆ ಮಾರಾಟ ಟೆಂಟರ್ ಕರೆಯಲಾಗಿದ್ದು, ಸಕ್ಕರೆ ಮಾರಾಟದಿಂದ ಬಂದ ಹಣದಲ್ಲಿ ಕಬ್ಬು ಪೂರೈಸಿರುವ ರೈತರಿಗೆ ಒಂದೇ ಕಂತಿನಲ್ಲಿ 3291 ರೂ.ಗಳನ್ನು ಪಾವತಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಹೆಚ್.ಡಿ.ಕೆ.ಗೆ ಪತ್ರ
ಮೈಷುಗರ್ ಕಾರ್ಖಾನೆಯ ಸುಪರ್ದಿಯಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಬೋಧಕ ಸಿಬ್ಬಂದಿಗೆ ವೇತನ ಪಾವತಿಸುವ ಭರವಸೆ ನೀಡಿದ್ದ,ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪತ್ರ ವ್ಯವಹಾರ ನಡೆಸಿ ವೇತನ ಪಾವತಿಗೆ ಕ್ರಮ ವಹಿಸುವ ಭರವಸೆ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಬೋರೇಗೌಡ, ಹೆಚ್.ಪಿ.ನಾಗರಾಜು, ಉದಯ್ ಕುಮಾರ್, ದ್ಯಾವಣ್ಣ, ಚಂದಗಾಲು ವಿಜಯ್ ಕುಮಾರ್ ಉಪಸ್ಥಿತರಿದ್ದರು.




