ಯುವನಿಧಿ ಯೋಜನೆಯಡಿ ನೋಂದಣಿಗೊಂಡ ಫಲಾನುಭವಿಗಳಿಗೆ ವಿವಿಧ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಕೊಡುವ ಉದ್ದೇಶದಿಂದ ಸರ್ಕಾರ ಯುವನಿಧಿ ಪ್ಲಸ್ ಯೋಜನೆ ಜಾರಿಗೆ ತಂದಿದೆ. ಯುವಜನತೆ ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವನಿಧಿ ಪ್ಲಸ್ ಯೋಜನೆಯ ಬಗ್ಗೆ ಫಲಾನುಭವಿಗಳು ನಿರ್ಲಕ್ಷ್ಯ ತೋರುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಫಲಾನುಭವಿಗಳ ಆಸಕ್ತಿಗೆ ಅನುಗುಣವಾಗಿ ಯುವನಿಧಿ ಪ್ಲಸ್ ಯೋಜನೆಯಡಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಯುವಜನತೆಗೆ ತಪ್ಪು ಕಲ್ಪನೆ ಬೇಡ ಎಂದು ತಿಳಿ ಹೇಳಿದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಬಹಳ ಅನುಕೂಲವಾಗುತ್ತಿದೆ. ಆದರೆ, ಕೆಲವು ಅನುಕೂಲಸ್ಥರು ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸರ್ಕಾರದಿಂದ ನೀಡುವ ಅಕ್ಕಿಯನ್ನು ಮಾರಾಟಮಾಡುವುದು ಕಾನೂನು ಬಾಹಿರ ಎಂದು ಎಚ್ಚರಿಸಿದರು.
77.44 ಕೋಟಿ ರೂ ಗೃಹಲಕ್ಷ್ಮಿ ಹಣ ಪಾವತಿ
ಮಂಡ್ಯ ಜಿಲ್ಲೆಯಲ್ಲಿ ಗೃಹಲಕ್ಷೀ ಯೋಜನೆಯಡಿ ಜೂನ್ ಮಾಹೆಯಲ್ಲಿ 387172 ಫಲಾನುಭವಿಗಳಿಗೆ ಒಟ್ಟು 77.44 ಕೋಟಿ ರೂ ಗಳಷ್ಟು ಹಣ ಪಾವತಿಸಲಾಗಿದೆ. 2024 ರ ಏಪ್ರಿಲ್ ಮಾಹೆಯಿಂದ 2025 ರ ಜೂನ್ ಮಾಹೆಯವರೆಗೆ ಒಟ್ಟು 1154 ಕೋಟಿ ರೂ ಧನಸಹಾಯ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಸಮಸ್ಯೆ ಪರಿಹಾರವಾದರೆ, ಗ್ಯಾರಂಟಿ ಯೋಜನೆಯ ಶೇಕಡಾ 80% ರಷ್ಟು ಸಮಸ್ಯೆ ಪರಿಹಾರವಾದಂತೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಬಡ ಕುಟುಂಬಗಳಿಗೆ ತಲುಪಿಸಲು ಹೆಚ್ಚು ಒತ್ತು ನೀಡಿ ಎಂದರು.
ಶಕ್ತಿ ಯೋಜನೆಯಡಿ 2025 ರ ಮೇ ಮಾಹೆಯಿಂದ ಜುಲೈ ಮಾಹೆಯವರೆಗೆ ಒಟ್ಟು 2.01 ಕೋಟಿ ಮಹಿಳೆಯರು ಉಚಿತವಾಗಿ ಟಿಕೆಟ್ ಪಡೆದು ಸಂಚರಿಸಿದ್ದು ಒಟ್ಟು 61. 88 ಕೋಟಿ ವೆಚ್ಚವಾಗಿರುತ್ತದೆ. ದುದ್ದಯಿಂದ ಮುತ್ತಿಗೆರೆ ಮಾರ್ಗವಾಗಿ ಸಂಚರಿಸುವ ವಿದ್ಯಾರ್ಥಿಗಳಿಗೆ ಬಸ್ಸಿನ ಸಂಚಾರ ಸಮಯದಿಂದ ಸಮಸ್ಯೆ ಉಂಟಾಗುತ್ತಿತ್ತು, ಸಮಸ್ಯೆ ಪರಿಹರಿಸಲು ದುದ್ದಯಿಂದ ಮುತ್ತಿಗೆರೆ ಮಾರ್ಗದ ಬಸ್ಸಿನ ಸಂಚಾರ ಸಮಯವನ್ನು ಬದಲಾಯಿಸಲಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ 2025 ರ ಏಪ್ರಿಲ್ ಮಾಹೆಯಿಂದ 2025 ರ ಜುಲೈ ಮಾಹೆಯವರೆಗೆ 8.22 ಕೋಟಿ ಯೂನಿಟ್ ಗಳನ್ನು ಫಲಾನುಭವಿಗಳು ಉಚಿತವಾಗಿ ಬಳಸಿದ್ದು, 79.08 ಕೋಟಿ ರೂ ಗಳಷ್ಟು ಹಣ ವೆಚ್ಚವಾಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಕುಮಾರ, ರುದ್ರಪ್ಪ, ಶಂಕರೇಗೌಡ, ಮಹಮ್ಮದ್ ಅನ್ಸರ್, ಬಸವರಾಜು, ರಮೇಶ್, ಮಾದೇಶ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪ್ರತೀಕ್ ಹೆಗ್ಡೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




