ಮಂಡ್ಯ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಸಾಮರಸ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಗಣೇಶ ಹಬ್ಬವನ್ನು ಆಚರಿಸಿ ಎಂದರು.
ಅನುಮತಿ ಕಡ್ಡಾಯ
ಗಣಪತಿ ಪ್ರತಿಷ್ಠಾಪಿಸಲು ಅನುಮತಿ ಕಡ್ಡಾಯ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ತಾಲ್ಲೂಕು ಕಚೇರಿಗಳಲ್ಲಿ ತೆರೆಯಲಾಗುವ ಏಕಗವಾಕ್ಷಿ ಕೇಂದ್ರದಲ್ಲಿ ಮನವಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಅನುಮತಿ ಪಡೆಯುವ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪಿಸುವ ದಿನಾಂಕ, ಅವಧಿ, ವಿಸರ್ಜನೆ ಮಾಡುವ ದಿನಾಂಕ ಮತ್ತು ಸ್ಥಳ, ಮೆರವಣಿಗೆಯ ರೂಟ್ ಮ್ಯಾಪ್ ಗಳನ್ನು ನಮೂದಿಸಬೇಕು. ಇದರಿಂದ ಪೊಲೀಸ್ ಬಂದೋಬಸ್ತ್, ಸಿ.ಸಿ.ಟಿ ವಿ ಅಳವಡಿಕೆ ಬ್ಯಾರಿಕ್ಯಾಡಿಂಗ್, ಚೆಸ್ಕಾಂ ಹಾಗೂ ಅಗ್ನಿ ಶಾಮಕ ಇಲಾಖೆಯಿಂದ ಅಗತ್ಯ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬಹುದು ಎಂದರು.

ಸ್ಥಳೀಯ ಮುಖಂಡರು ಒಂದೇ ಸ್ಥಳವನ್ನು ನಿಗದಿಪಡಿಸಿಕೊಂಡು ಗಣಪತಿ ವಿಸರ್ಜನೆ ಮಾಡಿದರೆ, ಜಿಲ್ಲಾಡಳಿತದಿಂದ ಬೇಕಿರುವ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಸುಲಭ ಎಂದರು.
ಪಿ.ಒ.ಪಿ ಗಣಪತಿ ಖರೀದಿ ಮಾಡಬಾರದು
ಮಂಡ್ಯ ಜಿಲ್ಲೆಯಲ್ಲಿ ಪಿ.ಒ.ಪಿ ಗಣಪತಿ ತಯಾರಿಸುವುದಿಲ್ಲ ಆದರೆ ಹೊರಗಿನಿಂದ ತಂದು ಮಾರಾಟ ಮಾಡುತ್ತಾರೆ. ಸಾರ್ವಜನಿಕರು ಪಿ.ಒ.ಪಿ ಗಣಪತಿ ಖರೀದಿ ಮಾಡಬಾರದು. ಆಯೋಜಕರು ಸಹ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅನ್ನ ಸಂತರ್ಪಣೆ ಸಂದರ್ಭದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.
ಹಬ್ಬದ ದಿನದಂದೇ ಗಣಪತಿ ಪ್ರತಿಷ್ಠಾಪಿಸಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ಸೆಪ್ಟೆಂಬರ್ 5 ರಂದು ಈದ್ ಮಿಲಾದ್ ಹಬ್ಬ ಇರುವುದರಿಂದ ಸದರಿ ದಿನದಂದು ಗಣಪತಿ ವಿಸರ್ಜನೆ ಮಾಡುವುದು ಬೇಡ. 9 ಹಾಗೂ 11 ದಿನಕ್ಕೆ ವಿಸರ್ಜನೆ ಮಾಡುವುದು ಉತ್ತಮ. ಗಣಪತಿ ಹಬ್ಬದ ದಿನದಂದೇ ಗಣಪತಿಯನ್ನು ಪ್ರತಿಷ್ಠಾಪಿಸಿ ಅದರ ಬದಲಾಗಿ ಬೇರೆ ದಿನ ಪ್ರತಿಷ್ಠಾಪಿಸುವುದು ಬೇಡ ಎಂದರು.
ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ನಿಗದಿಪಡಿಸುವ ರೂಟ್ ಮ್ಯಾಪ್ ಅನುಸಾರ ಮೆರವಣಿಗೆ ಚಲಿಸಬೇಕು. ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು.
ಕಿಡಿಗೇಡಿಗಳ ಬಗ್ಗೆ ನಿಗಾ
ಕೋಮು ಗಲಭೆ ಉಂಟುಮಾಡುವ ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸ್ಥಳೀಯರಿಗೆ ಕಿಡಿಗೇಡಿಗಳು ಹಾಗೂ ಸಂದೇಹಾತ್ಮಕ ಘಟನೆ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಮಾಹಿತಿ ನೀಡಿ. ಕೋಮು ಗಲಭೆ ಉಂಟು ಮಾಡುವ ಹಾಗೂ ಶಾಂತಿ ಕದಡುವ ಸಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದು ಹಾಗೂ ಸುಳ್ಳು ಸುದ್ದಿ ಹರಡುವವರ ಮೇಲೂ ಸಹ ಪೊಲೀಸ್ ತಂಡ ನಡುವೆ ನಿಗಾ ವಹಿಸುತ್ತಿದೆ. ಪ್ರಕರಣಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್ ಮಾತನಾಡಿ ಪರಿಸರ ಮಾಲಿನ್ಯ ಉಂಟುಮಾಡದಂತೆ ಗಣಪತಿ ಹಬ್ಬ ಆಚರಿಸೋಣ, ಈ ಬಾರಿ ಪುಟ್ಟದಾದ ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಉಪಯೋಗಿಸಿ ತಯಾರಿಸಿದ ಗಣಪತಿಯನ್ನು ಪ್ರತಿಷ್ಠಾಪಿಸಿ. ಪಿ.ಓ.ಪಿ ಗಣಪತಿಯನ್ನು ಕೆರೆ ನೀರಿನಲ್ಲಿ ವಿಸರ್ಜನೆ ಮಾಡಿದರೆ ಕೆರೆ ನೀರು ಮಲಿನವಾಗಿ ಮುಂದಿನ ದುಷ್ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ ಎಂದರು.
ಮಣ್ಣಿನ ಗಣಪತಿ ತಯಾರಿಗೆ ತರಬೇತಿ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ತಾಲ್ಲೂಕು ಮಟ್ಟದಲ್ಲಿ ಜೇಡಿ ಮಣ್ಣಿನಿಂದ ಗಣಪತಿ ತಯಾರಿ ಮಾಡಲು ಮಕ್ಕಳಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಮಕ್ಕಳು ಪ್ರತಿ ಬೀದಿಯಲ್ಲಿ ಗಣಪತಿ ಪ್ರತಿಷ್ಠಾಪಿಸುವುದು ಸಾಮಾನ್ಯ. ಮಕ್ಕಳು ತರಬೇತಿಯಲ್ಲಿ ಹಾಜರಾಗಿ ಅವರೇ ತಯಾರಿಸಿದ ಗಣಪತಿ ಪ್ರತಿಷ್ಠಾಪಿಸಲಿ. ಇದರರಿಂದ ಪರಿಸರ ಮಾಲಿನ್ಯ ವನ್ನು ತಡೆಗಟ್ಟಬಹುದು ಎಂದರು.
ಮಕ್ಕಳು ಮಣ್ಣಿನಲ್ಲಿ ಗಣಪತಿ ತಯಾರಿ ಮಾಡುವಾಗ ಕೆಲವು ಗಿಡಗಳ ಬೀಜವನ್ನು ಸೇರಿಸಿದರೆ. ಗಣಪತಿ ವಿಸರ್ಜನೆಯ ನಂತರ ಗಿಡಗಳು ಬೆಳೆದು ಹಸರೀಕರಣಕ್ಕೂ ಸಹ ಆದ್ಯತೆ ನೀಡಬಹುದು ಎಂದರು.
ಸಭೆಯಲ್ಲಿ ಹಾಜರಿದ್ದ ಮುಖಂಡರು ಶಾಂತಿ ಸಭೆಯ ಬದಲಾಗಿ ಸಾಮರಸ್ಯ ಸಭೆ ಎಂದು ಕರೆಯೋಣ, ಈದೆ ಮಿಲಾದ್ ನಲ್ಲಿ ನಡೆಯುವ ಮೆರವಣಿಗೆಯಲ್ಲಿ ವಿಧಿಸಲಾಗುವ ಷರತ್ತುಗಳನ್ನು ಸರಳೀಕರಣ ಮಾಡಿಕೊಡಿ, ಗಣಪತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಜಾನಪದ ಶೈಲಿಯ ಡೊಳ್ಳು ಕುಣಿತ, ತಮಟೆ, ವೀರಗಾಸೆ ಮುಂತಾದ ಪ್ರದರ್ಶನಗಳಿಗೆ ಅವಕಾಶ ನೀಡಬೇಕು. ಸಭೆಯಲ್ಲಿ ಹಾಜರಾಗಿರುವ ಮುಖಂಡರು ಯಾವುದೇ ಹಬ್ಬಗಳಲ್ಲಿ ಯಾವುದೇ ತೊಂದರೆ ಮಾಡುವುದಿಲ್ಲ ಕಿಡಿಗೇಡಿಗಳು ಗಲಭೆಗಳು ಸೃಷ್ಠಿಸುತ್ತಾರೆ ಅವರ ಮೇಲೆ ನಿಗಾವಿಡಿ. ಗಣಪತಿ ವಿಸರ್ಜನೆಗೆ ಪೊಲೀಸ್ ಇಲಾಖೆ ದಿನಾಂಕ ನಿಗದಿಪಡಿಸಬೇಕು. ಸಿ.ಸಿ ಕ್ಯಾಮರಾ ಹೆಚ್ಚು ಅಳವಡಿಸಿ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೆರೆಗಳ ಹತ್ತಿರ ಎಚ್ಚರಿಕೆ ವಹಿಸಿ.ಗಣಪತಿ ಹಬ್ಬದಲ್ಲಿ ಆಯೋಜಿಸುವ ಕಾರ್ಯಕ್ರಮಗಳು ಸಾಮರಸ್ಯದಿಂದ ಕೂಡಿರಲಿ, ಸ್ಪಧಾತ್ಮಕವಾಗಿ ಬೇಡ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಗಂಗಾಧರ ಸ್ವಾಮಿ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.




