Friday, June 21, 2024

ಪ್ರಾಯೋಗಿಕ ಆವೃತ್ತಿ

ಹೇಮಾವತಿ ನದಿ ನೀರಿನ ವಿಚಾರದಲ್ಲಿ ರಾಜಕಾರಣ; ‘ಕೈ’ ನಾಯಕರ ಆಕ್ರೋಶ

ಹೇಮಾವತಿ ಜಲಾಶಯ ಯೋಜನೆಯ ಗೊರೂರು ಜಲಾಶಯದಲ್ಲಿ ನೀರಿಲ್ಲದಿರುವ ಸಮಯದಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ಚರ್ಚಿಸದೆ ಕಾಲುವೆಗಳಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವಿಲ್ಲದ ಶಾಸಕರು ಗೊಂದಲಮಯವಾದ ಹೇಳಿಕೆಗಳನ್ನು ನೀಡಿ ರೈತರನ್ನು ದಿಕ್ಕು ತಪ್ಪಿಸಿ ಕುಡಿಯುವ ನೀರಿನ ಹೆಸರಿನಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ. ಎಲ್. ದೇವರಾಜು ಮತ್ತು ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಮಂಜು ಅವರು ಇದೇ ಮೊದಲ ಬಾರಿಗೆ ಗೆದ್ದು ಶಾಸಕರಾಗಿದ್ದಾರೆ. ರಾಜಕೀಯ ಅನುಭವವಿಲ್ಲ, ರೈತಾಪಿ ವರ್ಗದ ಜನರ ನೋವಿನ ಅರಿವಿಲ್ಲದ ಶಾಸಕರು ಮನಸೋ ಇಚ್ಛೆ ಮಾತಾಡಿ ತಾಲ್ಲೂಕಿನ ರೈತರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಭಾಗವಹಿಸಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರದ ಶಾಸಕರು ಹೇಮಾವತಿ ನೀರಿನ ವಿಚಾರವಾಗಿ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಚೆಸ್ಕಾಂ ಅಧಿಕಾರಿಗಳ ಸಭೆ ಕರೆದು ಮೊದಲು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಕುಡಿಯುವ ನೀರು ಪೂರೈಕೆಗಾಗಿ ತುಮಕೂರಿಗೆ ಕಳೆದ ಮೂರು ತಿಂಗಳ ಹಿಂದೆ ನೀರು ಹರಿಸಿದ್ದನ್ನು ಪ್ರಸ್ತಾಪಿಸಿರುವ ಶಾಸಕರು ಕೆ. ಆರ್. ಪೇಟೆ ತಾಲ್ಲೂಕು ಸೇರಿದಂತೆ ಮಂಡ್ಯ ಜಿಲ್ಲೆಯ ರೈತರಿಗೆ ಕುಡಿಯುವ ನೀರು ಕೊಡಿಸಲು ಜಿಲ್ಲಾ ಮಂತ್ರಿಗಳು ವಿಫಲರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡುವುದು ಸರಿಯಲ್ಲ, ತುಮಕೂರು ಜೈಲ್ಲೆಯ ರೈತರು ಕೂಡ ನಮ್ಮ ಅಣ್ಣ ತಮ್ಮಂದಿರೇ ಆಗಿದ್ದರೆ. ಪ್ರಸ್ತುತ ಹೇಮಾವತಿ ಜಲಾಶಯದಲ್ಲಿ ನೀರಿಲ್ಲದ ಸಮಯದಲ್ಲಿ ಕೆರೆ ಕಟ್ಟೆಗಳಿಗೆ ಕಾಲುವೆಯ ಮೂಲಕ ನೀರು ಹರಿಸಲು ಹೇಗೆ ತಾನೇ ಸಾಧ್ಯವೆಂದು ಶಾಸಕರು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ದೇವರಾಜು ಕಿಡಿ ಕಾರಿದರು.

ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಕುಮಾರ್, ಮುಖಂಡರಾದ ಕೊಡಿಮಾರನಹಳ್ಳಿ ದೇವರಾಜು, ಶೀಳನೆರೆ ಅಂಬರೀಶ್, ರಾಜಯ್ಯ, ದಿವಾಕರ್, ಎನ್. ಆರ್.ರವಿಶಂಕರ್, ಬಸ್ತಿ ರಂಗಪ್ಪ, ಬಿ.ರಾಜಶೇಖರ್, ಚೌಡಸಮುದ್ರ ಚಂದ್ರು, ಚೇತನಾ ಮಹೇಶ್ ಮತ್ತಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!