Tuesday, November 24, 2026

ಪ್ರಾಯೋಗಿಕ ಆವೃತ್ತಿ

‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಸಾಹಿತ್ಯ ಸಮ್ಮೇಳನದ ಹೆಮ್ಮೆಯ ಭಾಗ ; ಗೊ.ರು ಚನ್ನಬಸಪ್ಪ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಬೆಲ್ಲದಾರತಿ’ ಸ್ಮರಣ ಸಂಚಿಕೆಯು ಸಮ್ಮೇಳನದ ಅಭಿಮಾನ ಹಾಗೂ ಹೆಮ್ಮೆಯ ಭಾಗವಾಗಿದೆ. ಇದು ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಗೊ.ರು ಚನ್ನಬಸಪ್ಪ ತಿಳಿಸಿದರು.

ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಲ್ಲದಾರತಿ ಮಂಡ್ಯ ಜಿಲ್ಲೆಯ ಮಹತ್ವದ ದಾಖಲೆ, ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ವಿಶ್ವರೂಪ ದರ್ಶನ, 1000 ಪುಟಗಳಿಕ್ಕಿಂತ ಹೆಚ್ಚಿನ ಪುಟ ಹೊಂದಿರುವ ಈ ಗ್ರಂಥ 132 ಲೇಖನಗಳನ್ನು ಒಳಗೊಂಡಿದೆ. ಸಮ್ಮೇಳನಾಧ್ಯಕ್ಷರುಗಳು, ಕರ್ನಾಟಕ ಭಾರತ, ವಿಶ್ವ, ಅಭಿವೃದ್ಧಿ ಭಾರತ ಮತ್ತು ಮಧುರ ಮಂಡ್ಯ ಎಂಬ 5 ವಿಭಾಗಗಳು ಒಳಗೊಂಡಿದೆ ಎಂದು ವಿವರಿಸಿದರು.

ನಮ್ಮ ದೇಶವನ್ನೀಗ ನವಗ್ರಹಗಳು ಸುತುತ್ತಿವೆ. ಈ ನವಗ್ರಹಗಳು ಶಾಸ್ತ್ರ-ಪುರಾಣಗಳಲ್ಲಿ ಬರುವ ನವಗ್ರಹಗಳಲ್ಲ. ಆಧುನಿಕರೆನ್ನುವ ನಾವೇ ನಮ್ಮ ವಿಕೃತ ಮನಸ್ಸುಗಳಿಂದ ಸೃಷ್ಟಿಸಿರುವ ನವಗ್ರಹಗಳು. ಅವೆಂದರೆ, ವ್ಯಕ್ತಿಚಾರಿತ್ರ್ಯದ ದಾರಿದ್ರ, ಜಾಗತೀಕರಣದ ಜೂಜು, ಹಣ ಮತ್ತು ಅಧಿಕಾರದ ಹುಚ್ಚು, ಬುದ್ದಿಜೀವಿಗಳ ಮೂರ್ಖತನ, ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಮತಾಂಧತೆಯ ಮತಿಹೀನತೆ, ರಾಜಕೀಯ ವ್ಯವಸ್ಥೆಯ ಅನಾಯಕತ್ವ, ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ ಎಂದರು.

ಈ ಅನಿಷ್ಟ ನವಗ್ರಹಗಳ ಹಾವಳಿಯಲ್ಲಿ ನಮ್ಮ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾರ್ಥದ ಸಿಕ್ಕು, ಸ್ಥಾನದ ಸೊಕ್ಕು, ಸೇಡಿನ ಹಠ, ಅಸಹಿಷ್ಣುತೆ, ಭಯೋತ್ಪಾದನೆ, ಭ್ರಷ್ಟಾಚಾರ, ಲೈಂಗಿಕ ಲಾಲಸೆ, ವಿಶ್ವಾಸದ್ರೋಹ ಇತ್ಯಾದಿ ಅವಗುಣಗಳೆಲ್ಲ ತುಂಬಿಕೊಂಡು ಬಿಟ್ಟಿವೆ. , ಇದೆ ನೆಮ್ಮದಿ ಎನ್ನುವುದು ಬರಿಯ ಭ್ರಮೆಯಾಗಿದೆ. ಇದರಿಂದ ನಾವು ಹೊರಬರಬೇಕಿದೆ ಎಂದರು.

ಪುಣ್ಯದ ವಿಷಯ

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪುಣ್ಯದ ವಿಷಯ. ಮಂಡ್ಯ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯದ್ಭುತವಾಗಿ ಮೂಡಿಬಂದಿದೆ. ಇಲ್ಲಿ ನಡೆದ ಸಮ್ಮೇಳನದಲ್ಲಿ ಸೇರಿದ ಕನ್ನಡಾಸಕ್ತರು ಮುಂದೆ ನಡೆಯುವ ಸಮ್ಮೇಳನ ಆಯೋಜಕರಿಗೆ ಮಾದರಿಯಾಗಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಪೂರ್ವಸಿದ್ಧತೆಗಳು ಅತ್ಯವಶ್ಯಕವಾಗಿರುತ್ತದೆ. ಕನ್ನಡಕ್ಕಾಗಿ ಓಟ ಸಂಘಟಿಸಿದ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ಸಂಘಟಿಸಲು ಸಹಕರಿಸಿದ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಸೇರಿದಂತೆ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅತಿ ಶೀಘ್ರದಲ್ಲೇ ಕನ್ನಡ ಭವನಕ್ಕೆ ಶಂಕುಸ್ಥಾಪನೆ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಸಾಹಿತ್ಯ ಸಮ್ಮೇಳನದ ಉಳಿತಾಯ ಹಣ 2.20 ಕೋಟಿ ರೂ ಹಣವನ್ನು ಮೀಸಲಿಡಲಾಗಿತ್ತು. ಜಿಲ್ಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಶಾಸಕರ ಅನುದಾನದಡಿ ಶಾಸಕರಾದ ದಿನೇಶ್ ಗೂಳಿಗೌಡ, ರಮೇಶ್ ಬಂಡಿಸಿದ್ದೇಗೌಡ ಹಾಗೂ ಪಿ. ರವಿಕುಮಾರ ಅವರು ತಲಾ ಒಂದು ಕೋಟಿ ಅನುದಾನ ಕೊಡಲು ಒಪ್ಪಿರುತ್ತಾರೆ. ಒಟ್ಟಾರೆ ಅತ್ಯಕರ್ಷಕವಾಗಿ 5 ಕೋಟಿ ರೂ ಅನುದಾನದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದರು.

ಗಂಗರ ದೊರೆ ಶ್ರೀಪುರುಷ ಹೆಸರು ನಾಮಕರಣಕ್ಕೆ ಮನವಿ

ಮಂಡ್ಯ ವಿಧಾನಸಭಾ ಶಾಸಕರಾದ ಪಿ. ರವಿಕುಮಾರ್ ಗೌಡ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಜನರಿಗೆ ಊಟದ ವ್ಯವಸ್ಥೆಯಲ್ಲಿ ಕೊರತೆ ಉಂಟಾಗದಂತೆ ಸರ್ಕಾರ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿತಾಯಗೊಂಡ ಹಣದಿಂದ ನಿರ್ಮಿಸುತ್ತಿರುವ ಹೆಮ್ಮೆಯ ಕನ್ನಡ ಭವನಕ್ಕೆ ಮಂಡ್ಯ ಜಿಲ್ಲೆಗೆ ಹಾಗೂ ಕನ್ನಡಕ್ಕೆ ಕೊಡುಗೆ ನೀಡಿರುವ ಗಂಗರ ದೊರೆ ಶ್ರೀಪುರುಷ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು.

ಸಾಹಿತ್ಯದ ಮಹತ್ವ ದೊಡ್ಡದು

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ಜನಪ್ರತಿನಿಧಿಗಳು ಸಮಾಜವನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಬದಲಾವಣೆ ತಂದರೆ. ಸಾಹಿತಿಗಳು ಸಮಾಜವನ್ನು ಒಳ್ಳೆ ಹಾಗೂ ಕೆಟ್ಟ ರೀತಿಯಲ್ಲೂ ಬದಲಾಯಿಸಬಹುದು. ಸಾಹಿತ್ಯದ ಮಹತ್ವ ದೊಡ್ಡದು, ಬರವಣಿಗೆಯಿಂದ ಸಮಾಜದ ಬದಲಾವಣೆ ಆಗುತ್ತದೆ ಎಂದು ಸಾಹಿತ್ಯದ ಮಹತ್ವ ಸಾರಿದರು.

ಒಬ್ಬ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವ ತಾಕತ್ತು ಸಾಹಿತ್ಯಕ್ಕಿದೆ, ಜಗತ್ತನ್ನು ಬ್ರಹ್ಮ ಸೃಷ್ಟಿಸಿದರೆ ಕಾವ್ಯವನ್ನು ಬ್ರಹ್ಮಾಂಡದ ರೀತಿ ಕವಿ ಸೃಷ್ಟಿಸುತ್ತಾನೆ. ಒಳ್ಳೆಯ ಅಥವಾ ಕೆಟ್ಟ ಸಮಾಜವನ್ನು ಸ್ಥಾಪಿಸುವ ಶಕ್ತಿ ಕವಿ ಬರವಣಿಗೆಯ ಮೇಲೆ ನಿಂತಿದೆ ಅಂತಹ ಸಾಮರ್ಥ್ಯ ಸಾಹಿತಿ ಹಾಗೂ ಸಾಹಿತ್ಯಕ್ಕಿದೆ ಎಂದು ಹೇಳಿದರು.

ಸ್ಮರಣ ಸಂಚಿಕೆ ಕುರಿತು ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ ಹಾಗೂ ಡಾ.ಮೀರಾ ಶಿವಲಿಂಗಯ್ಯ ಅವರು ಸಂಕ್ಷಿಪ್ತವಾಗಿ ಮಾತನಾಡಿದರು. 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಸಮ್ಮೇಳನದ ವಿಶೇಷಾಧಿಕಾರಿ ಚಂದ್ರಶೇಖರ್ ಅವರು ನೀಡಿದ ಶೀರ್ಷಿಕೆ ಬೆಲ್ಲದಾರತಿ ಎಂಬ ಹೆಸರು ಆಯ್ಕೆಯಾಗಿರುವುದು ವಿಶೇಷ ಎಂದರು.

ಬೆಲ್ಲದಾರತಿ ಸ್ಮರಣಾ ಸಂಚಿಕೆ ಹೊರತರಲು ಶ್ರಮಿಸಿದ ಬಿ.ಸಿ. ಶಿವಾನಂದಮೂರ್ತಿ, ತೈಲೂರು ವೆಂಕಟಕೃಷ್ಣ, ಡಾ: ಚಿಕ್ಕಮರಳಿ ಬೋರೇಗೌಡ, ಮೀರಾ ಶಿವಲಿಂಗಯ್ಯ, ಮಾ ರಾಮಕೃಷ್ಣ, ಜಿ.ಆರ್ ಚಂದ್ರಶೇಖರ್, ಕೋಮಲ್ ಕುಮಾರ್, ಕೃಷ್ಣ ಮೂರ್ತಿ, ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಠ ಮೈಸೂರು ಶಾಖಾ ಮಠದ ಶ್ರೀಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮೈಶುಗರ್ ಸಕ್ಕರೆ ಕಂಪನಿ ಅಧ್ಯಕ್ಷ ಸಿ.ಡಿ ಗಂಗಾಧರ, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ