ಡೆಂಗ್ಯೂ ಜ್ವರ ತಡೆಗಟ್ಟಲು ಜಾಗೃತಿ ಮೂಡಿಸುವುದು, ಶಿಕ್ಷಣ ನೀಡುವುದು ಮತ್ತು ಪರಿಣಾಮಕಾರಿ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನಗೊಳಿಸುವುದು ಬಹಳ ಮುಖ್ಯ ಹಾಗೆಯೇ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ತೊಡೆದು ಹಾಕುವುದು ಮುಖ್ಯ ಪಾತ್ರ ವಹಿಸುತ್ತದೆ, ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಎನ್ ಕಾಂತರಾಜು ಹೇಳಿದರು.
ಶ್ರೀರಂಗಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಡೆಂಗ್ಯೂ ವಿರೋಧಿ ಮಾಸಾಚರಣೆ ಪ್ರಯುಕ್ತ ತಾಲೂಕು ಮಟ್ಟದಲ್ಲಿ ಹಾಸ್ಟೆಲ್ ,ವಸತಿ ಶಾಲಾ ವಾರ್ಡನ್ ಹಾಗೂ ಸಿಬ್ಬಂದಿಗಳಿಗೆ ಏರ್ಪಡಿಸಿದ ಅಡ್ವೋಕೆಸಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ಮಳೆಗಾಲ ಆರಂಭವಾಗಿದ್ದು ಎಲ್ಲಂದರಲ್ಲಿ ನೀರು ನಿಲ್ಲುವದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಚಿಕೂನ್ ಗುನ್ಯಾ,ಮಲೇರಿಯಾ ದಂತಹ ರೋಗಗಳು ಹರಡಬಹುದಾಗಿದ್ದು ಆದ್ದರಿಂದ ಪ್ರತಿಯೊಬ್ಬರೂ ಸೊಳ್ಳೆಗಳ ನಿಯಂತ್ರಣಕ್ಕೆ ಸಹಕಾರ ನೀಡಬೇಕು.ಅದೇ ರೀತಿ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ ಉಪಯೋಗಿಸಲು ತಿಳಿಸಬೇಕು ಒಟ್ಟಾರೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಡೆಂಗ್ಯೂ ಜ್ವರಕ್ಕೆ ಮುಂಜಾಗ್ರತೆ ಮದ್ದು ಎಂದರು.
ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ ಗಣೇಶ್ ಪ್ರಸಾದ್ ಮಾತನಾಡಿ ಮಕ್ಕಳ ಮಕ್ಕಳಲ್ಲಿ ಜ್ವರ ಕಂಡು ಜ್ವರ ಕಂಡು ಬಂದರೆ, ರಕ್ತ ಪರೀಕ್ಷೆ ಮಾಡಿಸಬೇಕು ಹಾಗೂ ನಿಲಯ ಪಾಲಕರು ಮತ್ತು ಸಿಬ್ಬಂದಿಗಳು ವಸತಿ ನಿಲಯಗಳ ಒಳಾಂಗಣ ಮತ್ತು ಹೊರಾಂಗಣದಲ್ಲಿ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳು ಇಲ್ಲದಂತೆ ನೋಡಿಕೊಂಡು ವಸತಿ ನಿಲಯಗಳನ್ನು ಈಡಿಸ್ ಲಾರ್ವ ಮುಕ್ತ ವಲಯಗಳನ್ನಾಗಿ ಮಾಡಲು ಸಹಕರಿಸಬೇಕೆಂದರು. ನಂತರ ಸೊಳ್ಳೆಗಳ ಬೆಳವಣಿಗೆ ಹಂತಗಳ ಬಗ್ಗೆ ಲಾರ್ವಾಗಳ ಪ್ರಾತ್ಯಕ್ಷಿಕೆಯೊಂದಿಗೆ ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.
ಈ ಕಾರ್ಯಾಗಾರದಲ್ಲಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ ವಿಜಯಲಕ್ಷ್ಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ್,ಆರೋಗ್ಯ ನಿರೀಕ್ಷಣಾಧಿಕಾರಿ ಫಣೀಂದ್ರ, ಕೃಷ್ಣೇಗೌಡ,ಚಂದನ,ರಮ್ಯಾ ಹಾಗೂ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಖಾಸಗಿ ವಸತಿ ನಿಲಯಗಳ ವಾರ್ಡನ,ಸಿಬ್ಬಂದಿ,ಅಡುಗೆ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.




