2022ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಅನ್ನು 2023ರ ಆಗಸ್ಟ್ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಆಶ್ವಥ್ ನಾರಾಯಣ ಸಿ.ಎನ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾಧುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023ರ ಮಾರ್ಚ್ ಮಾಹೆ ಅಂತ್ಯದಲ್ಲಿ ಕೆ-ಸೆಟ್ ಪರೀಕ್ಷೆ ನಡೆಸಲು ಪ್ರಕಟಣೆ ಹೊರಡಿಸಲಾಗುವುದು. ಏಪ್ರಿಲ್-ಮೇ ಮಾಹೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್ ಪರೀಕ್ಷೆ ನಡೆಸುವ ಸಂಬಂಧ ಸಿದ್ಧತೆ ನಡೆಸಿದೆ. ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ತಂತ್ರಾಂಶ ತಯಾರಿ ಮಾಡಲು ಮಾಹಿತಿ ಸಂಗ್ರಹಣೆ ಹಾಗೂ ಸಿದ್ಧತೆ ನಡೆದಿದೆ. ಕೆ-ಸೆಟ್ ಪರೀಕ್ಷಾ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಸುಧಾರಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯವು 2019 ರಿಂದ 2021ರ ವರೆಗೆ ನಡೆಸಿದ ಕೆ-ಸೆಟ್ ಪರೀಕ್ಷೆಗಳಲ್ಲಿ ವ್ಯಾಪಕವಾದ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರವು ತನಿಖೆಗೆ ಆದೇಶಿಸಿ, ಸ್ವಂತಂತ್ರ ಸಂಸ್ಥೆಯಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಕೆ-ಸೆಟ್ ಪರೀಕ್ಷೆ ನಡೆಸಲು ಆದೇಶ ಹೊರಡಿಸಿತ್ತು.
ತನಿಖಾ ವರದಿ ಪರಿಶೀಲನಾ ಹಂತದಲ್ಲಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಸರ್ಕಾರದ ಉಪ ಕಾರ್ಯದರ್ಶಿ ಸ್ನೇಹಲ್ ಸುಧಾಕರ ಲೋಖಂಡೆ ನೇತೃತ್ವದ ತ್ರಿಸದಸ್ಯರ ಸಮಿತಿಯು ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ವರದಿಯು ಪ್ರಸ್ತುತ ಪರಿಶೀಲನಾ ಹಂತದಲ್ಲಿರುವುದಾಗಿ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.




