ಆಸ್ತಿಗಾಗಿ ಮಗನೇ ಅಪ್ಪನನ್ನು ಬ್ಲಾಕ್ ಮೇಲ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪನ ಬಗ್ಗೆಯೇ ಅಶ್ಲೀಲ ಸಂದೇಶಗಳನ್ನು ಹಂಚಿಕೆ ಮಾಡಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್, ತನ್ನ ಮಗ ಪ್ರಣವ್ ಎಂಬುವನಿಂದ ಬ್ಲಾಕ್ ಮೇಲ್ ಗೆ ಒಳಗಾಗಿ, ಅಂತಿಮವಾಗಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆರೋಪಿಗಳಾದ ಪ್ರಣಬ್, ಅವನ ಸ್ನೇಹಿತರಾದ ಮಹೇಶ, ಈಶ್ವರ್, ಪ್ರೀತಮ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏನಿದು ಪ್ರಕರಣ ?
ಆನ್ ಲೈನ್ ಗೇಮ್ ಸೇರಿದಂತೆ ಹಲವು ದುಶ್ಚಟಗಳಿಗೆ ದಾಸನಾಗಿರುವ ಪ್ರಣವ್ ಈಗಾಗಲೇ ಕೋಟ್ಯಾಂತರ ರೂ.ಗಳನ್ನು ಕಳೆದುಕೊಂಡಿದ್ದಾನೆ. ಮತ್ತೇ ಹಣಕ್ಕಾಗಿ ತಂದೆಯ ಬಳಿ ಬೇಡಿಕೆಯಿಟ್ಟಿದ್ದಾನೆ ಎನ್ನಲಾಗಿದ್ದು, ಇದಕ್ಕೆ ಸೊಪ್ಪು ಹಾಕದ ತಂದೆಯ ವಿರುದ್ದವೇ ಅಶ್ಲೀಲ ವಿಡಿಯೋಗಳನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಬ್ಲಾಕ್ ಮೇಲ್ ಮಾಡಿದ್ದಾನೆ.
ಇದರಿಂದ ಬೇಸತ್ತ ಸತೀಶ್ ತನ್ನ ಮಗನಿಗೆ ಪ್ರಚೋದಿಸಿದವರು ಸೇರಿದಂತೆ ಮಗನ ವಿರುದ್ಧ ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು.




