ಮದ್ದೂರು ತಮಿಳು ಕಾಲೋನಿಯ ಶ್ರಮಿಕ ನಿವಾಸಿಗಳಿಗೆ ಹಂಚಿಕೆ ಮಾಡುವ ಉದ್ದೇಶದಿಂದ ಮದ್ದೂರು ತಾಲ್ಲೂಕಿನ ಕುದುರೆಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇ ನಂ.245 ರಲ್ಲಿ 3.0 ಎಕರೆ ಜಾಗವನ್ನು ನೀಡಿದ್ದು, ಕೊಳಗೇರಿ ಅಭಿವೃದ್ಧಿ ಮಂಡಳಿಗೆ ದಾಖಲೆಗಳ ಸಹಿತ ಆರ್.ಟಿ.ಸಿಯನ್ನು ಇಂಡೀಕರಣ ಮಾಡಿ ಹಸ್ತಾಂತರಿಸಿದ್ದ ಜಮೀನನ್ನು ಅನ್ಯವ್ಯಕ್ತಿಗಳು ಉಳುಮೆ ಮಾಡುತ್ತಿದ್ದು, ಅದನ್ನು ತೆರವಿ ಮಾಡಿಸಿ, ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಶ್ರಮಿಕರು ಕಳೆದ 2 ದಿನಗಳಿದಿಂದ ಮಂಡ್ಯನಗರ ಕೊಳಗೇರಿ ಅಭಿವೃದ್ದಿ ಮಂಡಳಿ ಎದುರು ಆಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಜಾಗೃತ ಕರ್ನಾಟಕದ ಮುಖಂಡ ಎನ್.ನಾಗೇಶ್ ಮಾತನಾಡಿ, ಶ್ರಮಿಕ ಜನರಿಗೆ ಎಲ್ಲರಂತೆ ಬದುಕು ಹಕ್ಕುಗಳಿವೆ, ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು ಅನ್ಯವ್ಯಕ್ತಿಗಳು ಜಮೀನು ಉಳುಮೆ ಮಾಡುತ್ತಿರುವುದನ್ನು ತೆರವು ಮಾಡಿಸಿ, 110 ಕುಟುಂಬಗಳ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಉಗ್ರರೂಪಕ್ಕೆ ಕೊಂಡೊಯ್ಯಲಾಗುವುದೆಂದು ಎಚ್ಚರಿಕೆ ನೀಡಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿಗೆ ದಾಖಲೆಗಳ ಸಹಿತ ಆರ್.ಟಿ.ಸಿಯನ್ನು ಇಂಡೀಕರಣ ಮಾಡಿ ಹಸ್ತಾಂತರಿಸಿದ್ದ ಜಮೀನನ್ನು ಅನ್ಯವ್ಯಕ್ತಿಗಳು ದಿಢೀರೆಂದು ಪ್ರತ್ಯೇಕ್ಷವಾಗಿ ಉಳುಮೆ ಮಾಡುತ್ತಿದ್ದು, ಇವರನ್ನು ತೆರವುಗೊಳಿಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು. ಶ್ರಮಿಕ ನಿವಾಸಿಗಳು ಭೂಮಿ ಹಕ್ಕು ಪಡೆಯುವ ತನಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಂದೆ ಆಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಿದ್ದಾರೆ ಎಂದರು.
ಮದ್ದೂರು ಪಟ್ಟಣದ ಕೆ.ಇ.ಬಿ ಮುಂಭಾಗದಲ್ಲಿ 80 ಕ್ಕೂ ಹೆಚ್ಚು ವರ್ಷಗಳ ಕಾಲ 110 ಕುಟುಂಬಗಳು ವಾಸಿಸುತ್ತಿದ್ದು, ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯ ತನಕ ಯಾವುದೇ ಸೌಲಭ್ಯಗಳಿಲ್ಲದೇ ಜೀವಿಸುತ್ತಿದ್ದಾರೆ. ಅವರಿಗೆ ಕೂಡಲೇ ನಿವೇಶನ ಹಂಚಿಕೆ ಮಾಡಿ ಸೂರು ಒದಗಿಸಬೇಕೆಂದು ಆಗ್ರಹಿಸಿದರು.
ಶ್ರಮಿಕ ನಿವಾಸಿಗಳಿಗೆ ಕೂಡಲೇ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರಗಳನ್ನು ನೀಡಬೇಕು. ಅಕ್ರಮ ಪ್ರವೇಶ ಮಾಡಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಅವರನ್ನು ಜಾಗದಿಂದ ತೆರವು ಮಾಡಬೇಕು. ಜಾಗವನ್ನು ಕೂಡಲೇ ಕೋಳಗೇರಿ ಅಭಿವೃದ್ಧಿ ಮಂಡಳಿಯ ವಶಕ್ಕೆ ಪಡೆದು ರಕ್ಷಣೆ ಮಾಡಿ 110 ಕುಟುಂಬಗಳಿಗೆ 20 x 30 ರಂತೆ ನಿವೇಶನ ಹಂಚಿಕೆ ಮಾಡಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದರಾಜು, ಮಹಿಳಾ ಮುನ್ನಡೆ ಶಿಲ್ಪ, ಪ್ರಕಾಶ್, ಚಂದ್ರಶೇಖರ್ ಹಾಗೂ ವೈದುನ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




