Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಶ್ರಮಿಕರ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದ ಹೋರಾಟಗಾರರು

ಮಂಡ್ಯ ಜಿಲ್ಲೆಯ ಶ್ರಮಿಕನಗರ (ಸ್ಲಂ)ಗಳಲ್ಲಿ ಅಲ್ಲಿನ ಜನರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳ ಕುರಿತು ಕರ್ನಾಟಕ ಜನಶಕ್ತಿ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಹಾಗೂ ಮಹಿಳಾ ಮುನ್ನಡೆ ಜಿಲ್ಲಾ ಕಾರ್ಯದರ್ಶಿ ಶಿಲ್ಪಾ ಅವರು ಜಿಲ್ಲಾಧಿಕಾರಿ ಡಾ.ಕುಮಾರ್ ಅವರ ಸಮ್ಮುಖದ ಸಭೆಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಅವುಗಳನ್ನು ಪರಿಹರಿಸುವಂತೆ ಗಮನ ಸೆಳೆದರು.

ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ ಹಾಗೂ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ವತಿಯಿಂದ ಸೆಪ್ಟೆಂಬರ್ 1 ರಿಂದ 8 ರವರಗೆ ಅಹೋರಾತ್ರಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕರೆದಿದ್ದ ಸಭೆಯಲ್ಲಿ ಹೋರಾಟಗಾರು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಹಲವು ಶ್ರಮಿಕ ನಗರಗಳಲ್ಲಿ ಅಕ್ರಮ ಮದ್ಯ ಮಾರಾಟ.ಗಾಂಜ, ಅಫೀಮು ಸೇರಿದಂತೆ ಹಲವು ಸಮಸ್ಯೆಗಳಿವೆ ಎಂದು ಸಿದ್ದರಾಜು ಅವರು ಗಮನ ಸೆಳೆದಾಗ, ಅದನ್ನು ಸುಧೀರ್ಘವಾಗಿ ಆಲಿಸಿದ ಜಿಲ್ಲಾಧಿಕಾರಿಗಳು, ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಪ್ರಶ್ನೆ ಹಾಕಿ ಶಾಶ್ವತ ಪರಿಹಾರ ನೀಡಲು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ನೀಡಿದ ನಿರ್ದೇಶನಗಳೇನು ?

ಮಂಡ್ಯನಗರದ ಕಾಳಪ್ಪ ಬಡವಣೆ ಸೇರಿದಂತೆ ಬೇರೆ ಶ್ರಮಿಕ ನಗರಗಳ ಸಾವಿರಾರು ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಿ, ವಸತಿ ಯೋಜನೆ ಕಲ್ಪಿಸುವ ಕಾರ್ಯಕ್ರಮ ಸದ್ಯದಲ್ಲೆ ಆಗುತ್ತದೆ. ಲ್ಯಾಂಡ್ ಅರ್ಮಿ ಕೊಳಗೇರಿ ಪ್ರದೇಶವು ಖಾಸಗಿ ಮಾಲಿಕತ್ವದಲ್ಲಿ ಇರುವುದರಿಂದ ದುಬಾರಿ ಪರಿಹಾರ ನೀಡಿ ಜಾಗ ಪಡೆಯಲು ಸಾಕಷ್ಟು ಹಣದ ಕೊರತೆ ಇರುವುದರಿಂದ 70 ಕುಟುಂಬಗಳಿಗೆ ಸರ್ಕಾರದ ಜಾಗವನ್ನು ಗುರುತಿಸಿ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಯವರು ಮಂಡ್ಯ ತಾಹಸೀಲ್ದಾರ್ ಅವರಿಗೆ ಸೂಚಿಸಿದರು.

ಗುರುಮಠ ಸ್ಲಂ ಪ್ರದೇಶವು ಸರ್ಕಾರಿ ಕಟ್ಟೆ ಎಂದು ಇದ್ದು ಈಗ ಅದರ ಸ್ವರೂಪ ಕಳೆದುಕೊಂಡಿದೆ. ಮರು ಘೋಷಣೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ತಿಳಿಸಿದರು. ನ್ಯೂ ತಮಿಳು ಕಾಲೋನಿಗೆ ಹಕ್ಕುಪತ್ರ ನೀಡಿದ್ದು.ಕಂದಾಯ ಕಟ್ಟಿಸಿಕೊಂಡು ಹಾಗೂ ನಮೂನೆ ಪತ್ರ ನೀಡುವ ಚಾಲನೆಯಲ್ಲಿದೆ ಮತ್ತು ಮೂಲಭೂತ ಸೌಕರ್ಯಗಳನ್ನು ನಗರಸಭೆಯಿಂದ ನೀಡಲು ಅಯುಕ್ತರಿಗೆ ತಿಳಿಸಿದರು.

ಇಂದಿರಾ ಬಡಾವಣೆ ಸ್ಲಂ ಜಾಗವು ರೈಲ್ವೆ ಇಲಾಖೆ ಹಾಗೂ ಖಾಸಗಿ ಮಾಲಿಕತ್ವದಲ್ಲಿದ್ದು, ಬಪರ್ ಜೋನ್ ನಲ್ಲಿ ಇರುವುದರಿಂದ ಪರ್ಯಾಯ ಜಾಗವನ್ನು ಗುರುತಿಸಿ ಸ್ಥಳಿಯ ನಿವಾಸಿಗಳ ಜೊತೆ ಸಭೆ ನಡೆಸಿ ಸ್ಥಳಾಂತರ ಮಾಡಿದರೆ ಸೂಕ್ತ ಎಂದು ಕೊಳಗೇರಿ ಅಬಿವೃದ್ದಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು

ಕಾಳಿಂಕಾಭ ಸ್ಲಂ ವಿಚಾರವಾಗಿ ಹೈಕೊರ್ಟ್ ನಲ್ಲಿ ಅಂತಿಮ ಆದೇಶ ಇದೇ ತಿಂಗಳ 28ರಂದು ನಿಗಧಿಯಾಗಿದೆ. ತೀರ್ಪು ಬಂದ ನಂತರ ಮುಂದಿನ ಕೆಲಸಗಳ ಭಾಗವಾಗಿ ತುರ್ತು ಕ್ರಮ ಜರುಗಿಸಲು ತಿಳಿಸಿದರು ಗಾಡಿ ಕಾರ್ಖಾನೆ ಶ್ರಮಿಕ ನಗರವನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಂಡು, ಕಂದಾಯ ಕಟ್ಟಿಸಿಕೊಂಡು ಫಲನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಲು ನಗರಸಭೆ ಅಯುಕ್ತರಿಗೆ ಅದೇಶ ನೀಡಿದರು.

ಸ್ಲಾಟರ್ ಹೌಸ್ ನ 5 ಕುಟುಂಬಗಳಿಗೆ ಪರ್ಯಾಯ ನಿವೇಶನ ನೀಡಲು ಅಶ್ರಯ ಕಮಿಟಿ ಸಭೆ ನಿಗಧಿ ಮಾಡಿ ನಿವೇಶನ ಕಾಯ್ದಿರಿಸಲು ನಗರಸಭೆ ಅಯುಕ್ತರು ಹಾಗೂ ಕೊಳಗೇರಿ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮದ್ದೂರು ತಮಿಳು ಕಾಲೋನಿಯವರಿಗೆ ನೀಡಿರುವ ಜಾಗದಲ್ಲಿ ಅನ್ಯ ವ್ಯಕ್ತಿಗಳು ಬಂದು ಉಳುಮೆ ಮಾಡಿರುವುದು ಕಾನೂನು ಬಾಹಿರ. ಹೈಕೊರ್ಟ್ ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು, ಜಿಲ್ಲಾಡಳಿತವು ತಕ್ಷಣ ಮುಂದಾಗಿ ಸ್ಥಳವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯ ವಶಕ್ಕೆ ಪಡೆದು ಮುಂದಿನ ಅಭಿವೃದ್ಧಿ ಯೋಜನೆ ನೀಡಲು ಅಗತ್ಯ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಮಹದೇವಪುರ ಬೋರೆಯ ಹಕ್ಕಿ ಪಿಕ್ಕಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ವಸತಿ ಯೋಜನೆಯೊಂದಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸಮಾಜ ಕಲ್ಯಾಣ ಇಲಾಖೆ ಹಾಗೂ ತಹಸೀಲ್ದಾರ್ ಮತ್ತು ಇಓ ಅವರಿಗೆ ಸೂಚನೆ ನೀಡಿದರು.

ಮಂಡ್ಯ ನಗರದ ಹಲವು ಕೊಳಗೇರಿ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟ ಬೇಕು. ಇದರಿಂದ ಸಣ್ಣ ವಯಸ್ಕರ ಮಕ್ಕಳು ಗಾಂಜಾ, ಅಫೀಮು ಮದ್ಯದ ಚಟಕ್ಕೆ ಬಿದ್ದು ಜೀವನ ಕಳೆದು ಕೊಳ್ಳುತ್ತಿದ್ದಾರೆ ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಂಘಟನೆಯ ಮೂಲಕ ತಿಳಿಸಲಾಗಿ, ಜಿಲ್ಲಾಧಿಕಾರಿಗಳು ಈ ವಿಷಯವಾಗಿ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಖಿ ಸೆಂಟರ್ ಬಳಕೆಗೆ ಸೂಚನೆ

ಮಂಡ್ಯ ಜಿಲ್ಲಾಸ್ಪತ್ರೆಯ ಕೆಲವು ಸಮಸ್ಯೆಗಳ ಕುರಿತು ಮಹಿಳಾ ಮುನ್ನಡೆ ಶಿಲ್ಪ ಮಾತನಾಡಿ, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಸಖಿ ಸೆಂಟರ್ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ತಕ್ಷಣವೆ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಖಿ ಸೆಂಟರ್ ಗೆ ಜಿಲ್ಲಾಡಳಿತ ಕಛೇರಿಯಲ್ಲಿ ಒಂದು ಕೊಠಡಿ ನೀಡಿದೆ ಹಾಗೂ ಅಸ್ಪತ್ರೆಯಲ್ಲಿ ಒಂದು ಕೊಠಡಿ ಇದೇ ಎರಡನ್ನು ನೊಂದ ಮಹಿಳೆಯರ ಸುರಕ್ಷತಾ ವಿಚಾರವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.

ಚಿಕ್ಕ ಮಕ್ಕಳ ಮೇಲೆ  ರೇಪ್ ಅಂಡ್ ಮರ್ಡರ್ ದೌರ್ಜನ್ಯಗಳು ಹೆಚ್ಚಾತ್ತಿವೆ ಅನ್ನೋದು ಎಲ್ಲಾ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹರಿಹರಿಯದ ಹೆಣ್ಣುಮಕ್ಕಳು ಗರ್ಭಿಣಿ ಆಗುತ್ತಿರುವುದು ದಿನನಿತ್ಯ ನಾವು ನೋಡುತ್ತಿದ್ದೇವೆ, ಬಲತ್ಕಾರದಿಂದ ಅಥವಾ ಅತ್ಯಾಚಾರದಿಂದ ಆ ಮಕ್ಕಳಿಗೆ ಸರಿಯಾಗಿ ಅರಿವಿಲ್ಲದೆ ಮಾಹಿತಿ ಇಲ್ಲದೆ ಇದರೊಳಗೆ ಸಿಕ್ಕಾಕಿಕೊಂಡಿದ್ದಾರೆ. ಹಾಗಾಗಿ ಹೆಚ್ಚು ಹೆಚ್ಚು ಅರಿವಿನ ಕಾರ್ಯಕ್ರಮಗಳನ್ನು ಮಾಡಬೇಕು ಬಾಲ ಗರ್ಭಿಣಿಯ ಮಕ್ಕಳು ಮತ್ತು ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು ಎಂದು ಶಿಲ್ಪ ಗಮನ ಸೆಳೆದರು.

ಮಹಿಳೆಯರು ಸಬಲೀಕರಣವಾಗಲೂ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ, ಮುದ್ರಾ ಸಾಲ ಮತ್ತು ಮಹಿಳಾ ಸಮೃದ್ಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಇದ್ದು ಸರ್ಕಾರವು ಮಹಿಳೆಯರಿಗೆ ಯಾವ ಯೋಜನೆಗಳು ಸಿಗುತ್ತಿಲ್ಲ, ಹಾಗಾಗಿ ಸಾಮಾನ್ಯ ಮಹಿಳೆಯರು ಮೈಕ್ರೋಫೈನಾನ್ಸ್ ನಂತಹ ಸಾಲದ ಸುಳಿಯೊಳಗೆ ಸಿಕ್ಕಿ ಪರದಾಡುತ್ತಿದ್ದಾರೆ. ಹಾಗಾಗಿ ಸರ್ಕಾರವು ಮಹಿಳೆಯರು ಮಕ್ಕಳು ವಿದ್ಯಾರ್ಥಿಗಳಿಗೆ ಸಿಗಬೇಕಾದಂತಹ ಯೋಜನೆಗಳು ಸರಿಯಾಗಿ ಸಿಗಬೇಕು ಎಂದು ಕೋರಿದರು.

ದೌರ್ಜನ್ಯ ಕೊಳಗಾದ ಹೆಣ್ಣು ಮಕ್ಕಳಿಗೆ ಸಖಿ ಸೆಂಟರ್ ಅನ್ನೋದು ಜಿಲ್ಲಾ ಆಸ್ಪತ್ರೆ ಒಳಗೆ ಇರಬೇಕು ಆದರೆ ಹೆಣ್ಣುಮಕ್ಕಳ ಬದುಕನ್ನು ಮತ್ತು ಹೆಣ್ಣು ಮಕ್ಕಳ ನ್ಯಾಯವನ್ನು ತರಕಾರಿ ಮಾರ್ಕೆಟ್ ನಲ್ಲಿ ಹಿಟ್ಟಿರೋದನ್ನು ನಾವು ಖಂಡಿಸುತ್ತೇವೆ, ಆದಷ್ಟು ಬೇಗ ಸಖಿ ಸೆಂಟರ್ ಇನ್ನು ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕು ಮತ್ತು ರಾತ್ರಿ ವೇಳೆ ವಾಹನದ ವ್ಯವಸ್ಥೆಯಾಗಬೇಕು.

ಕಟ್ಟಡ ಕಾರ್ಮಿಕರ ಸಮಸ್ಯೆಗಳು ಮತ್ತು ಕುಂದುಕೊರತೆಗಳು

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯಕ್ಕೆ ಯಶಸ್ವಿ ಪೋರ್ಟಲ್ ಅನ್ನು ಯಶಸ್ವಿ ಪೋರ್ಟಲ್ ನಲ್ಲಿ ಅರ್ಜಿ ಹಾಕುವುದನ್ನು ತಡೆಗಟ್ಟಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ವೆಬ್ ಸೈಟ್ ನಲ್ಲಿ ಶೈಕ್ಷಣಿಕ ಧನ ಸಹಾಯದ ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು. ಕಟ್ಟಡ ಕಾರ್ಮಿಕರ ಮಂಡಳಿಯಿಂದ ಮೊಬೈಲ್ ಕ್ಲಿನಿಕ್ ಗಳನ್ನು ತೆರೆದಿದ್ದು ಇದರಿಂದ ಕಲ್ಯಾಣ ಮಂಡಳಿಯ ನೂರಾರು ಕೋಟಿ ರೂಪಾಯಿ ಹಣ ಪೋಲಾಗುತ್ತಿದ್ದು ಇದರ ಬದಲಾಗಿ ಎಲ್ಲಾ ಕಟ್ಟಡ ಕಾರ್ಮಿಕರಿಗೂ ESI ಯನ್ನು ಜಾರಿಗೊಳಿಸಿದರೆ ಕಲ್ಯಾಣ ಮಂಡಳಿಯ ಹಣವು ಉಳಿಯಲಿದ್ದು ಎಲ್ಲಾ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ಸುರಕ್ಷೆ ಸಿಕ್ಕಂತಾಗುತ್ತದೆ ಎಂದರು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಸಮರ್ಪಕವಾಗಿ ಜಾರಿಯಾಗಬೇಕು ಮತ್ತು ಅವರಿಗೆ ಸಾಮಾಜಿಕ ಭದ್ರತೆ ಮತ್ತು ಯೋಜನೆಯ ಅಡಿ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಸಹಜ ಮರಣ ಮೊತ್ತವನ್ನು 50,000 ಕ್ಕೆ ಏರಿಕೆ ಮಾಡಬೇಕು ಮತ್ತು ಅಪಘಾತ ಮರಣ ಪರಿಹಾರ ಮೊತ್ತವನ್ನು 2 ಲಕ್ಷಕ್ಕೆ ಏರಿಕೆ ಮಾಡಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ನಿವೃತ್ತಿ ಪಿಂಚಣಿ 2,000 ಕ್ಕೆ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಸಲು ಬಿಲ್ಡಿಂಗ್ ಮತ್ತು ಓನರ್ ಲೈಸೆನ್ಸ್ ಮತ್ತು ಮೇಸ್ತ್ರಿಗಳ ಲೈಸೆನ್ಸ್ ಕೇಳುತ್ತಿರುವುದನ್ನು ಕಡಿಮೆ ಮಾಡಬೇಕು. ನೈಜ ಕೆಲಸ ಮಾಡುತಿರುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಕೊಡಬೇಕು ಮತ್ತು ಇಲಾಖೆಯಿಂದ ಮತ್ತು ಸರ್ಕಾರದಿಂದ ಬರುವ ಯೋಜನೆಗಳು ಕಾರ್ಮಿಕರಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ಕೋರಿದರು.

ಸಭೆಯಲ್ಲಿ ಮದ್ದೂರು ತಹಸೀಲ್ದಾರ್, ಮುಡಾ ಅಯುಕ್ತರು, ನಗರಸಭೆ ಅಯುಕ್ತರು, ಜಿಲ್ಲಾಸ್ಪತ್ರೆ ಅಧಿಕಾರಿಗಳು, ಸಮಾಜಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಕೊಳಗೇರಿ ಅಬಿವೃದ್ದಿ ಮಂಡಳಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಮಂಡ್ಯ ಜಿಲ್ಲೆ ವಿವಿಧ ಶ್ರಮಿಕ ನಗರಗಳ ಮುಖಂಡರಾದ ಶಿವಣ್ಣ, ನಿಂಗಮ್ಮ, ವೈದುನಾ, ಪ್ರಕಾಶ್, ದಿವಾಕರ್, ಲತಾ, ಯಶೋಧಮ್ಮ, ಪ್ರಕಾಶ್, ಸುಶೀಲಾ ಹಾಗೂ ರೇಖಾ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ