ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಸೃಷ್ಟಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಡಾನ್ ಬಾಸ್ಕೋ ಸೊಸೈಟಿಯ ನಿರ್ದೇಶಕ ರೆವರೆಂಡ್ ಫಾದರ್ ಡಾ.ಪೀಟರ್ ಹೇಳಿದರು.
ಮಂಡ್ಯ ತಾಲ್ಲೂಕಿನ ತಿಮ್ಮನಹೊಸೂರು ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಡಾನ್ ಬೋಸ್ಕೋ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಕೇಂದ್ರ ಮಂಡ್ಯ ಹಾಗೂ ಮಂಗಲ ಗ್ರಾಮಪಂಚಾಯಿತಿ ಇವರ ಸಹಯೋಗದೊಂದಿಗೆ ಮಂಗಲ, ಹೆಬ್ಬಕವಾಡಿ, ತಿಮ್ಮನಹೊಸೂರು, ಲೋಕಸರ, ಮಾರಸಿಂಗನಹಳ್ಳಿ ಗ್ರಾಮಗಳಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಸಂಪತ್ತು ಜೀವರಾಶಿಗಳ ಉಳಿವಿಗೆ ಆಧಾರವಾಗಿದೆ. ಕಲುಷಿತಗೊಳ್ಳುತ್ತಿರುವ ವಾತಾವರಣವನ್ನು ಪರಿಶುದ್ಧಗೊಳಿಸುವುದು ಮರಗಿಡಗಳಾಗಿವೆ. ಇಂದಿನ ಜನತೆ ಪರಿಸರ ಮಾಲಿನ್ಯ ಮಾಡುವುದು ಅಪರಾಧವಾಗಿದೆ. ಮುಂದಿನ ಪೀಳಿಗೆಗೆ ಶುದ್ಧ ಪರಿಸರ ನೀಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.
ಗ್ರಾಮೀಣ ವ್ಯಾಪ್ತಿಯಲ್ಲಿ ವನಸಂರಕ್ಷಣೆಗಾಗಿ ಉದ್ಯಾನವನ ನಿರ್ಮಾಣ ಅಗತ್ಯವಿದೆ.ಮನೆಗೊಂದು ಮಗು ಮನೆಗೊಂದು ಮರ ಅವಶ್ಯಕವಾಗಿದೆ.ಸಸ್ಯಸಂಪತ್ತು ಉಳಿಸಿಕೊಳ್ಳುವುದು ಮತ್ತು ಬಳಸುವುದು ಅನಿವಾರ‍್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ವಹಿಸಿದ್ದರು.
ಉಪಾಧ್ಯಕ್ಷ ಎನ್. ಮಹೇಶ್, ಪಿಡಿಒ ಕೃಷ್ಣೇಗೌಡ, ಪ್ರೌಢಶಾಲಾ ಶಿಕ್ಷಕರಾದ ರಘುನಂದನ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್, ಮಂಜುಳಾ, ಮಂಗಲ ಪಿಎಸಿಎಸ್ ಅಧ್ಯಕ್ಷ ಭೈರಾಜ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.