Friday, November 20, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲಿ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ

ಕಲೆಗಳ ತವರೂರು ಎಂದೇ ಖ್ಯಾತಿಯಾಗಿದ್ದ ಜಿಲ್ಲೆಯೊಳಗೆ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ. ಬೇರೆ ಕಡೆಯಿಂದ ಕಲಾವಿದರನ್ನು ಕರೆಯಿಸಿ ಮೆರೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಕಳವಳ ವ್ಯಕ್ತಪಡಿಸಿದರು.

ಮಂಡ್ಯನಗರದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಶನಿವಾರ ಸಂಜೆ ಗಾನಕಲಾ ಮಂದಿರ, ನಿನಾದ ಸಂಗೀತ ಪಾಠಶಾಲೆ ಇವರ ವತಿಯಿಂದ ಆಯೋಜಿಸಿದ್ದ ಭಾವಾಂತರಂಗ ಮಕ್ಕಳ ಸಂಗೀತೋತ್ಸವ ಮತ್ತು ಗುರುಗಳಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾಟಕ, ಸಂಗೀತ, ನೃತ್ಯ ಎಲ್ಲ ಪ್ರಾಕಾರಗಳಿಗೂ ಮಂಡ್ಯ ಖ್ಯಾತಿ ಪಡೆದಿತ್ತು. ಆದರೆ ಇಂದು ಕಲಾವಿದರ ಸಂಖ್ಯೆಯೇ ಕ್ಷೀಣಿಸುತ್ತಿದೆ.ಇದು ದುರಂತದ ವಿಷಯ ಎಂದರು.

ಒಳ್ಳೆಯ ಹಾಡುಗಾರರಿಲ್ಲ. ಉತ್ತಮ ತರಬೇತಿ ಪಡೆದ ವಾದ್ಯಗಾರರೂ ಇಲ್ಲ‌ ಸಂಗೀತ, ನೃತ್ಯ ನಾಟಕಗಳಿಗೆ ಸಂಗೀತಗಾರರು, ವಾದ್ಯಗಾರರ ಅಗತ್ಯವಿದೆ. ಇದಕ್ಕೆ ಮುಖ್ಯವಾಗಿ ರಂಗಸಜ್ಜಿಕೆಗಳ ಕೊರತೆ ಎದ್ದು ಕಾಣುತ್ತದೆ. ಹಿಂದೆಲ್ಲಾ ಟೆಂಟ್‌ಹೌಸ್‌ಗಳು ಇದ್ದವು. ಅಲ್ಲಿ ಒಂದಷ್ಟು ತರಬೇತಿಯನ್ನೂ ನೀಡಲಾಗುತ್ತಿತ್ತು. ಆದರೆ ಈಗ ಅಂತಹ ಸ್ಥಿತಿ ಇಲ್ಲ. ಸಂಗೀತ ಪರಿಕರಗಳನ್ನು ನುಡಿಸಲು ಕಲಿಯುವವರೇ ಬರುತ್ತಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಳಲು, ಪಿಟೀಲು, ಮೃದಂಗ ವಾದಕರು ನಮ್ಮಲ್ಲೂ ಇರಬೇಕು ಎಂದು ಹೇಳಿದರು.

ಸಾಹಿತಿ ಡಾ. ಎಸ್. ಶ್ರೀನಿವಾಸಶೆಟ್ಟಿ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. ಅಂತಹ ಗುರುವಿಗೆ ವಂದನೆ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಲೆಯನ್ನು ಗುರುವಿಂದ ಕಲಿತಿರುತ್ತಾರೆ ಎಂದರು.

ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೀವನದಲ್ಲಿ ಆಸ್ವಾದಿಸಬೇಕು. ಲಲಿತ ಕಲೆಗಳು ಒಳ್ಳೆಯ ಕೆಲಸವನ್ನು ಮಾಡುತ್ತವೆ. ಮನಸ್ಸಿಗೆ ಮುದ ನೀಡುತ್ತವೆ. ಸಂಗೀತ ಕೇಳುವುದರಿಂದ ಹೊಟ್ಟೆ ತುಂಬುವುದಿಲ್ಲ ನಿಜ. ಆದರೆ ಮನಸ್ಸಿನ ಎಲ್ಲ ತುಮುಲಗಳೂ ನಾಶವಾಗುತ್ತವೆ. ಮನಸ್ಸನ್ನು ಶುದ್ಧೀಕರಿಸಲು, ಪ್ರಪುಲ್ಲವಾಗಿಟ್ಟುಕೊಳ್ಳಲು ಸಂಗೀತ ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.

ಸಂಗೀತ ನಮ್ಮ ಮನೋವ್ಯಾದಿಯನ್ನೂ ಗುಣಪಡಿಸುತ್ತೆ. ಸಂಗೀತ ಥೆರಪಿಯಿಂದ ಒಂದಷ್ಟು ಮನಸ್ಸಿನ ಕ್ಲೇಷಗಳೂ ನಿವಾರಣೆಯಾಗುತ್ತದೆ ಎಂದರು.
ಖ್ಯಾತ ಸಂಗೀತಗಾರ ಡಾ. ಸುಚೇತನ್ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಆರ್.ಪ್ರತಿಭಾ, ಎಂ.ಪಿ. ನಿಶ್ಚಯ್‌ಜೈನ್, ಎನ್.ಎಸ್. ಮಣಿ, ಗುರುಮೂರ್ತಿ, ರಶ್ಮಿ ಚಿಕ್ಕಮಗಳೂರು, ಸುನೀತಾ ನಂದಕುಮಾರ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ