ರಾಜ್ಯದಲ್ಲಿ ನಡೆಯುತ್ತಿರುವ ಅಶಾಂತಿಯ ಘಟನೆಗಳು ಕೊನೆಯಾಗಬೇಕು. ಸಾಹಿತ್ಯದ ಮೂಲಕ ಅಶಾಂತಿಯುಂಟು ಮಾಡುವ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತೊಡಗಬೇಕು ಎಂದು ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಸಲಹೆ ನೀಡಿದರು.
ಮಂಡ್ಯ ನಗರದ ಸೇವಾಕಿರಣ ಸಭಾಂಗಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಡಿಜೆಸಿಎಂಎಸ್ ಶೋಷಿಯಲ್ ಸರ್ವೀಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಕವಿಯೊಂದಿಗೆ ಕವಿತೆ ಕೇಳಿ’ ಹಾಗೂ ಶ್ರಾವಣ ಸಂಗೀತ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಸಮೂಹವನ್ನು ಸಾಹಿತ್ಯದೆಡೆಗೆ ಕರೆದುಕೊಂಡು ಹೋಗಲು ಚಿಂತನೆ ಮಾಡಬೇಕಿದೆ. ಆ ಮೂಲಕ ಅವರಲ್ಲಿ ಸಾಹಿತ್ಯಾಭಿರುಚಿ ಬೆಳೆಸಬೇಕು. ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೂ ಅಶಾಂತಿ ವಾತಾವರಣ ಉಂಟು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದು ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸ ಎಂದು ವಿಷಾದಿಸಿದರು.
ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟು ಮಾಡಲಾಗುತ್ತಿದೆ. ಅಮಾಯಕ ನಾಗರಿಕರನ್ನು ಬಲಿಪಶು ಮಾಡಲಾಗುತ್ತಿದೆ. ಇವರಿಗೆ ಸಾಹಿತ್ಯದ ಅರಿವಾಗಬೇಕು. ಪ್ರತಿಯೊಬ್ಬರೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮಾಜದಲ್ಲಿ ಶಾಂತಿಯ ಬಾಳ್ವೆ ನಡೆಸಲು ಮುಂದಾಗಬೇಕು. ಅದಕ್ಕೆ ಎಲ್ಲ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಕವಿತೆಗೆ ತನ್ನದೇ ಶಕ್ತಿಯಿದೆ. ಕವಿತೆ ಬರೆಯುವ ಮಹತ್ವದ ಅರಿವು ಕವಿಗಳಾದವರಿಗೆ ಇರಬೇಕು. ಸಮಾಜದ ವಸ್ತುನಿಷ್ಠತೆಯ ಅವಲೋಕನದಲ್ಲಿಯೂ ಕವಿ ತೊಡಗುವುದು ಮುಖ್ಯವಾಗಬೇಕು. ಅನುಭವಿಸಿ ಬರೆಯುವುದರಿಂದ ಕಾವ್ಯಕ್ಕೆ ಬೆಲೆಯಿರುತ್ತದೆ. ಆ ಅನುಭವದ ಕಾವ್ಯ ಎಲ್ಲರ ಮನ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಕವಿಗೋಷ್ಠಿಯಲ್ಲಿ ಹಲವಾರು ಕವಿಗಳು ಕವಿತೆ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಂತೋಷ್ ಚೊಕ್ಕಾಡಿ, ನಾರಾಯಣ್ ತಿರುಮಲಾಪುರ, ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್, ಶಿಕ್ಷಕ ಸತೀಶ್ ಜವರೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.




