ಭಾರತದಲ್ಲಿ ರಕ್ತದ ಕೊರತೆಯಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣ ತಗ್ಗಿಸಲು ರಕ್ತದಾನ ಅಗತ್ಯ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಹೇಳಿದರು.
ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಆವರಣದಲ್ಲಿ ಸಂತೆಕಸಲಗೆರೆ ಗ್ರಾಮಪಂಚಾಯಿತಿ, ನೆಲದನಿ ಬಳಗ ಮಂಗಲ, ಮಂಡ್ಯ ಸಹಕಾರ ಲಯನ್ಸ್ ಸಂಸ್ಥೆ, ಕಾವೇರಿ ಗೆಳೆಯರ ಬಳಗ, ಮಿಮ್ಸ್ ರಕ್ತನಿಧಿ ಕೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ಹಾಗೂ ಡಾನ್ ಬೋಸ್ಕೋ ಸಂಸ್ಥೆ ಯತ್ತಗದಹಳ್ಳಿ ಇವರು ಆಯೋಜಿಸಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಮತ್ತು ಸಸಿ ನೆಡುವ-ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಗತ್ಯವಿರುವ ರೋಗಿಗಳಿಗೆ ರಕ್ತ ಲಭಿಸುವಂತೆ ಮಾಡುವುದು ಮತ್ತು ಎಲ್ಲೆಡೆ ರಕ್ತ ಲಭ್ಯತೆ ಇರುವಂತೆ ನೋಡಿಕೊಳ್ಳವುದು ಪ್ರತಿ ಯೊಬ್ಬ ಪ್ರಜೆಯ ಜವಯಬ್ದಾರಿಯಾಗಿದೆ. ರಕ್ತದಾನ ಬಗ್ಗೆ ಜಾಗೃತಿ ಮೂಡಿಸುವುದು ರಕ್ತದಾನಿಗಳ ಸೇವಾಕಾರ್ಯವಾಗಿದೆ, ಜೀವ ಉಳಿಸಿ ಮಾನವೀಯತೆ ಮೆರೆಯದ ಯುವಜನತೆ ವ್ಯರ್ಥವೆನಿಸಿಕೊಳ್ಳುತ್ತಾರೆ ಎಂದರು.
ಸಹಕಾರ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜೆ. ಜಿ. ಲಿಂಗರಾಜು ಮಾತನಾಡಿ, ಗ್ರಾಮೀಣ ಯುವಜನತೆ ರಕ್ತದಾನ ಮತ್ತು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು, ಜೀವ ಮತ್ತು ಜೀವನ ಅಮೂಲ್ಯ, ಅಪಘಾತ, ಕ್ಯಾನ್ಸರ್, ಹೃದಯಸಂಬಂಧಿ ಸಮಸ್ಯೆಗಳು, ಹೆರಿಗೆ ಸಂಬಂಧಿ ಚಿಕಿತ್ಸೆಯ ವೇಳೆ ವ್ಯಾಪಕವಾಗಿ ರಕ್ತ ಬೇಕಾಗಿದ್ದು, ದಾನಿಗಳ ಕೊರತೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ-ಕರ್ನಾಟಕ ಸೇರಿದಂತೆ ಇಡೀ ವಿಶ್ವದಾದ್ಯಂತ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಮಂದಿ ರಕ್ತದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ಮೃತರಾಗುತ್ತಿದ್ದಾರೆ, ಅಂತವರಲ್ಲಿ ನಮ್ಮ ಸಂಬಂಧಿಕರೂ ಇರುತ್ತಾರೆ ಎಂದು ನುಡಿದರು.
ನಂತರ ಅರೋಗ್ಯ ಶಿಕ್ಷಣಾಧಿಕಾರಿ ಕೆ.ರಾಜು ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ 5ಕೋಟಿ ಯೂನಿಟ್ ರಕ್ತ ಬೇಕಾಗಿದೆ, ಕೇವಲ 2.5ಕೋಟಿ ಯೂನಿಟ್ ಮಾತ್ರ ರಕ್ತ ಲಭ್ಯವಾಗುತ್ತಿದೆ.ದೇಶದಲ್ಲಿ ಪ್ರತಿ 2 ಸೆಕೆಂಡ್‌ಗೆ ಯಾರಿಗಾದರೂ ರಕ್ತದ ಅಗತ್ಯ ಬಿದ್ದೇ ಬೀಳುತ್ತಿದೆ, ಪ್ರತಿ ವರ್ಷ ಅಂದಾಜು 3 ಕೋಟಿ ರಕ್ತದ ಘಟಕಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂತೆಕಸಲಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಮಾಜಿ ಉಪಾಧ್ಯಕ್ಷ ಬಸವರಾಜು, ಸದಸ್ಯ ಸತೀಶ್, ನೆಲದನಿ ಬಳಗದ ಕಾರ್ಯದರ್ಶಿ ಎಲ್.ಕೆ.ಯೋಗೇಶ್ ಸಂತೆಕಸಲಗೆರೆ, ಡಾನ್ ಬೋಸ್ಕೋ ಸಂಸ್ಥೆಯ ಫಾದರ್ ಜ್ಯೂಲಿಯನ್, ಸಂಚಾಲಕ ವೆಂಕಟರಾಜು, ನೆಲದನಿ ಬಳಗದ ನಂಜುಂಡೇಗೌಡ, ಸಹಕಾರ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್. ಎಂ. ಶಂಕರೇಗೌಡ, ಎಚ್.ಕೆ. ಕುಮಾರಸ್ವಾಮಿ ಹಾಜರಿದ್ದರು.




