ದುಬೈ : ಮಂಗಳೂರು ಜಿಲ್ಲೆಯ ಉಪ್ಪಿನಂಗಡಿಯ ಸಮೀಪದ ವಳಾಲ್, ಬಜತೂರು ಗ್ರಾಮದ ಪಟ್ಟೆ ಮನೆ ಅಮಿಷ ಆನಂದ್ ಇದೇ ಬರುವ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 4 ರ ವರೆಗೆ ಶ್ರೀಲಂಕಾದ ಕೊಲಂಬೋ ದಲ್ಲಿ ನಡೆಯಲಿರುವ 22 ವರ್ಷ ವಯೋಮಿತಿಯೊಳಗಿನ ವಿಭಾಗದ ಹುಡಗಿಯರ ಇಂಡೋರ್ ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಕ್ರಿಕೆಟ್ ಪಂದ್ಯ ಕೂಟದಲ್ಲಿ U.A.E ಸೇರಿದಂತೆ ಆಸ್ಟ್ರೇಲಿಯಾ ,ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಶ್ರೀಲಂಕಾ ಹಾಗು ಭಾರತದ ಮಹಿಳಾ ತಂಡಗಳು ಭಾಗವಹಿಸಲಿದೆ, ಕೇವಲ 14 ವಯಸ್ಸಿನ ಈಕೆ U.A.E ಯ ಅಂತಾರಾಷ್ಟ್ರೀಯ ಇಂಡೋರ್ ಕ್ರಿಕೆಟ್ ತಂಡದ ಕಿರಿಯ ಆಟಗಾರ್ತಿಯಾಗಿದ್ದು, ಕರ್ನಾಟಕ ಮೂಲದ ಆಟಗಾರ್ತಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಸದ್ಯ ದುಬೈ ಜೆ ಎಸ್ ಎಸ್ ಪ್ರೈವೇಟ್ ಸ್ಕೂಲ್ ನಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ಅಮಿಷ ಆನಂದ್, ದುಬೈ ಯಲ್ಲಿ ನೆಲೆಸಿರುವ ಕ್ರೀಡಾ ಪ್ರೇಮಿ ಹಾಗೂ ಪ್ರೋತ್ಸಾಹಿ ಆನಂದ್ ಪಟ್ಟೆ ಮತ್ತು ವಿನುತಾ ಆನಂದ್ ದಂಪತಿಯ ಏಕೈಕ ಮಗಳು.
ಸೀಸನ್(ಹಾರ್ಡ್)ಬಾಲ್ ನಲ್ಲಿ U.A.E ಕ್ರಿಕೆಟ್ ಬೋರ್ಡ್ ನ ಅಂಡರ್ 15,16 ಮತ್ತು ಅಂಡರ್ 19ರ ಹುಡುಗಿಯರ ವಿಭಾಗದ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯ ಕೂಟದಲ್ಲಿ ಅತಿಥಿ ತಂಡಗಳಾದ ಇಂಗ್ಲೆಂಡ್ ನ್ಯೂಜಿಲ್ಯಾಂಡ್, ಅಮೇರಿಕಾ ಹಾಗು ಓಮನ್ ತಂಡಗಳೆದುರು U.A.E ಪರವಾಗಿ ಆಡಿದ ಅನುಭವ ಇದೆ.
ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಜೋ ರೂಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆಯಲ್ಪಡುವ ರೂಟ್ ಕಪ್ ಅಂಡರ್ 16 ಹುಡುಗಿಯರ ವಿಭಾದಲ್ಲಿ ಸತತ ಎರಡನೇ ಬಾರಿ ದುಬೈ ತಂಡವನ್ನು ಪ್ರತಿನಿಧಿಸಿ, ಅತಿಥ್ಯ ತಂಡಗಳಾದ ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳನ್ನು ಸೋಲಿಸಿ UAE ತಂಡವು ರೂಟ್ ಕಪ್ ನ್ನು ಗೆದ್ದುಕೊಂಡಿತ್ತು.
ಬಹುಮುಖ ಪ್ರತಿಭೆಯಾಗಿರುವ ಈಕೆ ಕ್ರಿಕೆಟಿನೊಂದಿಗೆ ವಾಲಿಬಾಲ್ ,ಅಥ್ಲೆಟಿಕ್ ,ಈಜುಗಾರಿಕೆ, ಹಾಡುಗಾರಿಕೆ ಹಾಗೂ ನೃತ್ಯದಲ್ಲೂ ಮುಂಚೂಣಿಯಲ್ಲಿದ್ದಾಳೆ. U.A.Eಯ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ನಿಶಾ ಆಲಿ ಗರಡಿಯಲ್ಲಿ ತರಬೇತಿ ಪಡೆಯುತಿದ್ದು, U.A.E ಯ ಮಾಜಿ ನಾಯಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಅಧಿಕಾರಿಯಾಗಿರುವ ಛಾಯ ಮುದ್ದ್ಗಲ್ ಮಾರ್ಗದರ್ಶನದೊಂದಿಗೆ ಅಂತಾರಾಷ್ಟ್ರೀಯಯ ಕ್ರಿಕೆಟಿಗೆ ತಯಾರಾಗುತ್ತಿದ್ದಾರೆ.




