ಕಾವೇರಿ ಆರತಿ ಹಿನ್ನೆಲೆಯಲ್ಲಿ ಇಂದಿನಿಂದ ಅಂದರೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2 ರವರೆಗೆ ಕೆ.ಆರ್.ಎಸ್ ಬೃಂದಾವನಕ್ಕೆ ಆಗಮಿಸುವ ಸಾರ್ವಜನಿಕರ ವಾಹನಕ್ಕೆ ಟೋಲ್ ಹಾಗೂ ಬೃಂದಾವನ ವೀಕ್ಷಣೆಯ ಪ್ರವೇಶ ಶುಲ್ಕ ಇರುವುದಿಲ್ಲ ಎಲ್ಲರೂ ಉಚಿತವಾಗಿ ಪ್ರವೇಶಿಸಬಹುದು ಎಂದಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ಅವರು ತಿಳಿಸಿದ್ದಾರೆ.
ಉಚಿತ ಬಸ್ ವ್ಯವಸ್ಥೆ
ಕಾವೇರಿ ಆರತಿ ಸಮಾರಂಭಕ್ಕೆ ಆಗಮಿಸಲು ಕಾವೇರಿ ನೀರಾವರಿ ನಿಗಮದಿಂದ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದ ಸ್ಥಳೀಯರಿಗಾಗಿ ಸೆಪ್ಟೆಂಬರ್ 26 ರಂದು ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ಸೆಪ್ಟೆಂಬರ್ 28 ರಂದು ಕೆ. ಆರ್ ಪೇಟೆ, ನಾಗಮಂಗಲ ಮತ್ತು ಸೆಪ್ಟೆಂಬರ್ 29 ರಂದು ಮದ್ದೂರು, ಸೆಪ್ಟೆಂಬರ್ 30 ರಂದು ಮಳವಳ್ಳಿಯ ಸಾರ್ವಜನಿಕರಿಗಾಗಿ ಕಾವೇರಿ ಆರತಿಗಾಗಿ ಬಸ್ಸನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಬಸ್ಸಿನ ವ್ಯವಸ್ಥೆಯನ್ನು ಸದುಪಯೋಗ ಪಡೆದುಕೊಂಡು ಮದ್ಯಾಹ್ನವೇ ಕೆ. ಆರ್. ಎಸ್ ಗೆ ಆಗಮಿಸಿ ಬೃಂದಾವನವನ್ನು ನೋಡಿಕೊಂಡು ಸಂಜೆ 6 ಗಂಟೆಗೆ ಕಾವೇರಿ ಆರತಿ ಸಮಾರಂಭದಲ್ಲಿ ಭಾಗವಹಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾವೇರಿ ಆರತಿ ಯಶಸ್ವಿಗೊಳಿಸಿ ಎಂದು ಶಾಸಕರು ಕೋರಿದ್ದಾರೆ.
ಲಾಡು ವಿತರಣೆ
ಕಾವೇರಿ ಆರತಿ ನಡೆಯುವ ದಿನಗಳಂದು ಪ್ರತಿನಿತ್ಯ ಲಾಡು ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಲಾಡು ವಿತರಣೆ ಮಾಡುವ ಮಾದರಿಯಲ್ಲಿ “ಕಾವೇರಿ ಆರತಿ” ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕಾವೇರಿ ತಾಯಿ ಪ್ರಸಾದವಾಗಿ ಲಾಡನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ.




