ಮಂಡ್ಯ ನಗರದ ಹೊಳಲು ರಸ್ತೆಯಲ್ಲಿ ಮುಡಾಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಸೋಮವಾರ ಬೆಳಿಗ್ಗೆ ಮುಡಾ ಅಧಿಕಾರಿಗಳು ತೆರವುಗೊಳಿಸಿದರು.

ಮಂಡ್ಯದ ಕೆರೆ ಅಂಗಳದ ವಿವೇಕಾನಂದ ಬಡಾವಣೆಗೆ ಹೊಳಲು ರಸ್ತೆಯ ಮೂಲಕ 80 ಅಡಿಯ ರಸ್ತೆಯನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದೆ. ಈ 80 ಅಡಿ ರಸ್ತೆಯಲ್ಲಿಯೇ ಅಂಗಡಿಗಳನ್ನು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿತ್ತು.
ಈ ಅಂಗಡಿ ಮಳಿಗೆಯ ಮಾಲೀಕರಿಗೆ ಮುಡಾಗೆ ಸೇರಿದ ರಸ್ತೆಯಲ್ಲಿ ಅಂಗಡಿ ಮಳಿಗೆ ನಿರ್ಮಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಮಾಲೀಕರು ನಮಗೆ ಮುಡಾ ನಿವೇಶನ ಬೇರೆಡೆ ಬೇಡ. ನಮಗೆ ಇಲ್ಲೇ ಕೊಡುವಂತೆ ಹಠ ಹಿಡಿದಿದ್ದರು. ಅನಧಿಕೃತವಾಗಿ ಅಂಗಡಿ ಮಳಿಗೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮುಡಾಗೆ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಮುಡಾ ಆಯುಕ್ತ ಕೃಷ್ಣ ಕುಮಾರ್ ನೇತೃತ್ವದಲ್ಲಿ ಮುಡಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿ-ಮಳಿಗೆಗಳನ್ನು ತೆರವುಗೊಳಿಸಿದ್ದಾರೆ.




