ಕಮಿಷನ್ ಕುರಿತು ಸಂಸದೆ ಸುಮಲತಾ ಅಂಬರೀಶ್ ಹಾಕಿರುವ ಸವಾಲು ಸ್ವೀಕರಿಸಿದ್ದೇನೆ, ಸಂಸದರು ನಿಗದಿ ಮಾಡಿರುವ ಮೇಲುಕೋಟೆ ದೇವಸ್ಥಾನದಲ್ಲೇ ದಿನಾಂಕ, ಸಮಯ ನಿಗದಿ ಮಾಡಿದರೆ ಅಲ್ಲಿಗೆ ಬಂದು ಆಣೆ ಮಾಡಲು ಸಿದ್ಧ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸವಾಲು ಹಾಕಿದರು.
ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಸಿ.ಎಸ್. ಪುಟ್ಟರಾಜು, ನಾನು ಆಣೆ ಪ್ರಮಾಣ ಮಾಡಲು ಸಿದ್ದನಿದ್ದೇನೆ. ಮೇಲುಕೋಟೆ ಚಲುವನಾರಾಯಣ ಸನ್ನಿಧಿಯಲ್ಲಿ ಅಂತ ಅವರೇ ಹೇಳಿದ್ದಾರೆ. ಇನ್ನು ದಿನಾಂಕ, ಸಮಯ ನಿಗದಿ ಮಾಡಿ ನಾನು ಬಂದು ಪ್ರಮಾಣ ಮಾಡುವೆ ಎಂದರು.
ಸಂಸದೆ ಸುಮಲತಾ ಅವರು ಜೆಡಿಎಸ್ ಶಾಸಕರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುತ್ತಾರೆ. ಹೆಚ್ಚು ಮಾತನಾಡಿದರೆ ಬೇಗ ಜನರಿಗೆ ಹತ್ತಿರವಾಗುತ್ತಾರೆಂದು ಅವರು ಅಂದು ಕೊಂಡಿದ್ದಾರೆ. ಅಂಬರೀಷ್ ಅವರ ವ್ಯಕ್ತಿತ್ವ ಹಾಗೂ ಗುಣಗಳನ್ನು ಮೆಚ್ಚಿಕೊಂಡು ಜಿಲ್ಲೆಯ ಜನರು ಇವರನ್ನು ಆಯ್ಕೆ ಮಾಡಿದ್ದಾರೆ. ಇವರು ಆಯ್ಕೆಯಾಗಿ ನಾಲ್ಕು ವರ್ಷ ಆಗ್ತಾ ಇದೆ. ಇವರ ಸಾಧನೆ ಏನು ? ಜಿಲ್ಲೆಯ ಅಭಿವೃದ್ದಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ನಾನು, ನನ್ನ ಪತ್ನಿ, ನನ್ನ ಅಣ್ಣನ ಮಗ ಎಲ್ಲರೂ ಜಿ.ಪಂ ಸದಸ್ಯರಾಗಿದ್ದೆವು. ಆ ಕಾಲದಿಂದಲೂ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಕ್ಷೇತ್ರ ಜನರಿಗೆ ನಮ್ಮ ಬಗ್ಗೆ ಗೊತ್ತಿದೆ. ಇವರು ನೀಡುವ ಸರ್ಟಿಫಿಕೇಟ್ ನನಗೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಹತ್ತಿರ ಬಂದಾಗ ಇಂತಹ ಆರೋಪಗಳನ್ನು ಮಾಡುತ್ತಾರೆ. ನಾವು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನೀವು ಗೌರವದಿಂದ ರಾಜಕಾರಣ ಮಾಡಿ. ಅಂಬರೀಷ್ ಅಣ್ಣನ ವ್ಯಕ್ತಿತ್ವ ನಂಗೆ ಗೊತ್ತು. ನನ್ನ ಬಗ್ಗೆಯೂ ಅವರಿಗೆ ಚೆನ್ನಾಗಿ ಗೊತ್ತಿತ್ತು ಎಂದರು.




