ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದೆ ಹೋಗುತ್ತಿದ್ದರು ಎಲ್ಲೋ ಒಂದು ಕಡೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಇರುವುದರಿಂದ ಇತ್ತೀಚೆಗೆ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ಪಂದನ ಆಸ್ಪತ್ರೆ ಮಂಡ್ಯ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆದ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುಷ್ಯನ ಜೀವನ ಅತಿ ಅಮೂಲ್ಯವಾದದ್ದು ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂದು ಪ್ರತಿಯೊಬ್ಬರು ತಿಳಿದು ಕೊಳ್ಳಬೇಕು ಎಂದರು.
ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಂದ ಮರಣ ಹೊಂದು ತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲೂ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಹೃದಯ ಮನುಷ್ಯನ ಜೀವಂತಿಕೆ ಸಂಕೇತ.ಹೃದಯದ ಬಡಿತದೊಂದಿಗೆ ಶುರುವಾಗುವ ಜೀವನ ಹೃದಯದ ಸದ್ದು ನಿಲ್ಲುವುದರೊಂದಿಗೆ ಕೊನೆಯಾಗುತ್ತದೆ.ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆ ಹೃದಯ ಮತ್ತು ಬದುಕನ್ನು ಜೋಪಾನ ವಾಗಿಡುತ್ತವೆ.ಬೇರೆಯವರಿಗಾಗಿ ಮಿಡಿಯುವ ಹೃದಯ ತನ್ನ ಆರೋಗ್ಯಕ್ಕೂ ಮಿಡಿಯುವಂತಾಗಲಿ ಎಂದು ಆಶಿಸಿದರು.
ಸ್ಪಂದನ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಆದಿತ್ಯಗೌಡ ಮಾತನಾಡಿ ತುರ್ತು ಹೃದಯ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಅನಿವಾರ್ಯವಾಗಿ ಮೈಸೂರು ಅಥವಾ ಇತರ ನಗರಗಳಿಗೆ ತಲುಪಲು ಸಮಯ ಬೇಕಾಗಿರುತ್ತದೆ ಆದರೆ ನಮ್ಮ ಸ್ಪಂದನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕೇಂದ್ರವಿದ್ದು ಹೃದಯದ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಬಳಸಲಾಗುವ ಒಂದು ಸುಸಜ್ಜಿತ ವೈದ್ಯಕೀಯ ಸೌಲಭ್ಯವಾಗಿದೆ. ಹೃದಯ ಸಂಬಂಧಿ ಚಿಕೆತ್ಸೆಗೆ ೧ ನಿಮಿಷವು ಅತ್ಯಮೂಲ್ಯವಾಗಿದೆ ಆದ್ದರಿಂದ ಅಂತಹ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಗೆ ಬಂದರೆ ತುರ್ತು ಚಿಕಿತ್ಸೆ ನೀಡಲಾಗುವುದು ಮತ್ತು ದಿನದ ೨೪ ಗಂಟೆಯೂ ಈ ಸೇವೆ ಲಭ್ಯವಿದೆ ಎಂದು ಅರಿವು ಮೂಡಿಸಿದರು.
ಜಯದೇವ ಹೃದ್ರೋಗ ತಜ್ಞೆ ಡಾ.ಹೇಮಾ ಮಾತನಾಡಿ ಹೃದಯ ದೇಹದ ಅತಿ ಮುಖ್ಯ ಅಂಗ ವಾಗಿದ್ದು ಈ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಿದರೆ ನಾವು ಆರೋಗ್ಯಕರವಾಗಿ ಜೀವನ ನಡೆಸಲು ಸಾಧ್ಯ.ಆದರೆ ಇತ್ತೀಚಿನ ದಿನಗಳಲ್ಲಿ,ಅನಾರೋಗ್ಯಕರ ಜೀವನಶೈಲಿ,ಒತ್ತಡ, ಅನಾರೋಗ್ಯ ಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯ ಕಾರಣದಿಂಗಾಗಿ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ.ಅದರಲ್ಲೂ ಹೃದಯಾಘಾತದಿಂದ ಮರಣ ಹೊಂದುತ್ತಿರುವವರ ಸಂಖ್ಯೆ ತೀರ ಹೆಚ್ಚುತ್ತಿದೆ.ಅದೇ ಉತ್ತಮ ಜೀವನಶೈಲಿ,ಆರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಸೇರಿದಂತೆ ಆರೋಗ್ಯಕರ ಅಭ್ಯಾಸ ಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಹೃದಯದ ಆರೋಗ್ಯ ವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್‌ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ , ಹೃದಯ ಸಂಬಂಧಿ ಕಾಯಿಲೆಗಳು ವೃದ್ಧಾಪ್ಯದಲ್ಲಿ ಮಾತ್ರ ಬಾಧಿಸು ವುದಿಲ್ಲ,ಬದಲಾಗಿ ಯುವಜನರ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಜನರಿಗೆ ತಿಳಿಸುವುದು ವಿಶ್ವ ಹೃದಯ ದಿನದ ಉದ್ದೇಶ ವಾಗಿದೆ ಎಂದು ತಿಳಿಸಿದರು.
ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಕ್ಕೆ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಚಾಲನೆ ನೀಡಿ ಮಾತನಾಡಿ ಸೆ.29 ರಂದು ಪ್ರತಿವರ್ಷ ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಹೃದಯದ ಬಗ್ಗೆ ಗಮನ ಹೆಚ್ಚಾಗಿ ಬೇಕಾಗಿದೆ. ಹೃದಯದ ಬಗ್ಗೆ ಹೆಚ್ಚು ಕಾಳಜಿ ಇದ್ದರೆ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ದೇಹದ ಆರೋಗ್ಯ ಹಾಗೂ ಹೃದಯದ ಆರೋಗ್ಯವನ್ನು ಒಳ್ಳೆ ರೀತಿ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥ ಕಾರ್ಯಕ್ರಮ ದಲ್ಲಿ ಎಸ್.ಡಿ.ಜಯರಾಮ್ ಇನ್ಸ್ಟಿ ಟ್ಯೂಟ್ ಆಫ್ ನರ್ಸಿಂಗ್ ಪ್ಯಾರಾಮಾಡಿಕಲ್ ಸೈನ್ಸ್ , ಬಿ ಎಸ್ ಎಲ್ ಸ್ಕೂಲ್ ಆಫ್ ನರ್ಸಿಂಗ್ ಅಂಡ್ ಪ್ಯಾರಾ ಮೆಡಿಕಲ್ ಸೈನ್ , ಎ ಇ ಟಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಅಂಡ್ ಡಾ ಸರ್.ಎಂ.ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ಪಂದನ ಆಸ್ಪತ್ರೆಯಿಂದ ಡಿಸಿ ಕಚೇರಿವರೆಗೂ ನಡೆದ ವಾಕಥಾನ್ ನಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸುವ ಭಿತ್ತಿಫಲಕ, ಚಿತ್ರಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರಾದ ಮಂಗಲ ಯೋಗೇಶ್, ಟಿ.ನಾರಾಯಣಸ್ವಾಮಿ ,ರಕ್ಷಿತ್, ಮಂಗಲ ಲಂಕೇಶ್ ಸೇರಿದಂತೆ ಇತರರು ಇದ್ದರು.




