ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಹೋರಾಟ ಮಾಡಿರುವ ಮಹನೀಯರು, ಕವಿಗಳ ಬಗ್ಗೆ ಪಠ್ಯಪುಸ್ತಕದಲ್ಲಿ ತಿರುಚಿ ಅಗೌರವ ತೋರಿರುವ ರೋಹಿತ್ ಚಕ್ರತೀರ್ಥನ ಬಂಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ಮಂಡ್ಯ ನಗರದ ಗಾಂಧಿಭವನದಿಂದ ವಿ.ವಿ ರಸ್ತೆಯ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ಸಂಜಯ ವೃತ್ತದಲ್ಲಿ ರೋಹಿತ್ ಚಕ್ರತೀರ್ಥನ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಮ್, ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥ ಎಂಬ ಅಯೋಗ್ಯನನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ನಾಡು-ನುಡಿ, ನೆಲ-ಜಲದ ಬಗ್ಗೆ ಹೋರಾಟ ಮಾಡಿರುವ ಮಹನೀಯರು, ಕವಿಗಳ ಬಗ್ಗೆ ತಿರುಚಿ ಅವಮಾನ ಮಾಡಿಸಿದೆ.ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ, ನಾಡ ಗೀತೆಯ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಈತನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಗ್ಗೆ ಇತಿಹಾಸ ತಿರುಚಿರುವ ಇವನ ವಿರುದ್ಧ ಕನ್ನಡಿಗರು ಮೌನವಹಿಸದೆ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ತಿಳಿಸಿದರು. ಕರವೇ ಕಾರ್ಯಕರ್ತರಾದ ವೆಂಕಟೇಶ್, ಶಂಕರ್, ಬೋರೇಗೌಡ, ಸೋಮಶೇಖರ್, ಪುನೀತ್, ಪಾಂಡು ಸೇರಿದಂತೆ ಹಲವರಿದ್ದರು.