ಶ್ರೀರಂಗಪಟ್ಟಣದಲ್ಲಿ ಸರ್ಕಾರ ಆಯೋಜಿಸಿದ್ದ ಕಾವೇರಿ ಆರತಿ ಸರ್ಕಾರದ ಮಂತ್ರಿಗಳು ಶಾಸಕರು ಕಮಿಷನ್ ಹೊಡೆಯಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಡಾ. ಕೆ ಅನ್ನದಾನಿ ಟೀಕಿಸಿದ್ದಾರೆ.
ಮಳವಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನರ ಭಾರಿ ವಿರೋಧದ ನಡುವೆ ಸರ್ಕಾರದ ನೂರಾರು ಕೋಟಿ ಹಣ ಬಿಡುಗಡೆ ಮಾಡಿಕೊಂಡು ನಡೆಸಿರುವ ಕಾವೇರಿ ಆರತಿ ಹೆಸರಿನ ಕಾರ್ಯಕ್ರಮ ದುಡ್ಡು ಹೊಡೆಯುವ ಕಾರ್ಯಕ್ರಮವಲ್ಲದೆ ಬೇರೇನು ಇಲ್ಲ ಎಂದು ಆರೋಪಿಸಿದರು.
ರೈತರು ನಾಟಿ ಮಾಡಲು ನೀರಿಗೆ ಪರದಾಡುತ್ತಿರುವ ಸಂದರ್ಭದಲ್ಲಿ ರೈತರಿಗೆ ನೀರು ಒದಗಿಸಿ ಅವರ ಹಿತ ಕಾಯುವುದನ್ನು ಬಿಟ್ಟು ನೀರಾವರಿ ಸಚಿವರು ಆದ ಡಿ ಕೆ ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ರೈತ ಸಂಘಟನೆಗಳ ತೀವ್ರ ವಿರೋಧವನ್ನು ಲೆಕ್ಕಿಸದೆ ದುಡ್ಡು ಹೊಡೆಯಲು ವಾಮಮಾರ್ಗದ ಕಾರ್ಯಕ್ರಮ ಮಾಡಿದ್ದು ಇದಕ್ಕೆ ಜನ ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಇದಲ್ಲದೆ ಮಳವಳ್ಳಿ ತಾಲ್ಲೂಕಿನಲ್ಲಿ ನಿರಂತರವಾಗಿ 5 ಕೊಲೆಗಳು ನಡೆದಿರುವುದು ಮಳವಳ್ಳಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದ್ದು ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಿಗಿಕ್ರಮ ಕೈಗೊಳ್ಳಬೇಕು. ಜೊತೆಗೆ ತಾಲ್ಲೂಕಿನಲ್ಲಿ ತನ್ನ ಅವಧಿಯಲ್ಲಿ ಅಳವಡಿಸಿದ್ದ ಶಿಲನ್ಯಾಸ ಫಲಕಗಳನ್ನು ಹೊಡೆದು ಹಾಕಿದ್ದು ಈ ಕುರಿತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಕಳೆದ 28 ರಂದು ಟಿಎಪಿಸಿಎಂಎಸ್ ಚುನಾವಣೆಯ ಬಿ ತರಗತಿ ವಿಭಾಗದಲ್ಲಿ ಜೆಡಿಎಸ್ ಬೆಂಬಲಿತ ಐದು ಮಂದಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟ ಷೇರುದಾರ ಮತದಾರರಿಗೆ ತಮ್ಮ ಧನ್ಯವಾದಗಳನ್ನು ತಿಳಿಸಿದರು.
ಇದೇ ವೇಳೆ ಟಿಎಪಿಸಿಎಂಎಸ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಶಿವರುದ್ರಪ್ಪ, ಶೋಭಾ, ರತ್ನಮ್ಮ, ಚಂದಹಳ್ಳಿ ಶ್ರೀಧರ್, ರಾಮಣ್ಣ ಅವರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ರವಿ, ಮಾಜಿ ಜಿ ಪಂ ಸದಸ್ಯ ಹನುಮಂತು, ಪುಟ್ಟಯ್ಯ, ಪುರಸಭಾ ಸದಸ್ಯ ನಂದಕುಮಾರ್ , ಮುಖಂಡರಾದ ಸಿದ್ದಾಚಾರಿ, ಕಾಂತರಾಜು, ಕಂಬರಾಜು, ವೇಣು ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.




