Saturday, November 21, 2026

ಪ್ರಾಯೋಗಿಕ ಆವೃತ್ತಿ

ಕೆಆರ್‌ಎಸ್‌ನಲ್ಲಿ ವ್ಯವಸ್ಥಿತವಾಗಿ ಒಂದು ಸ್ಟೇಡಿಯಂ ಮಾಡೋಣ : ಡಿ.ಕೆ.ಶಿವಕುಮಾರ್

ಕೆಆರ್‌ಎಸ್‌ನಲ್ಲಿ ವ್ಯವಸ್ಥಿತವಾಗಿ ಒಂದು ಸ್ಟೇಡಿಯಂ ಮಾಡೋಣ. ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಎಲ್ಲಾ ಅರ್ಚಕರಿಂದ ಪೂಜೆ ಮಾಡಲಾಗುತ್ತದೆ. ಇಲ್ಲಿಗೆ ಭಕ್ತರು ಬರಬೇಕು, ಜನರಿಗೆ ಉದ್ಯೋಗ ಸಿಗಬೇಕು. ಬೆಳಗ್ಗೆ ಕೂಡ ಜನರು ಕಾವೇರಿಗೆ ಬಂದು ಪೂಜೆ ಮಾಡಬೇಕು. ಕಾವೇರಿ ಆರತಿಯಿಂದ ನಮ್ಮ ರಾಜ್ಯದ ಎಲ್ಲ ವೈದಿಕರಿಗೂ ಅನುಕೂಲವಾಗಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನದಲ್ಲಿ 5 ದಿನಗಳ ಕಾಲ ನಡೆದ ಕಾವೇರಿ ಆರತಿಯಲ್ಲಿ ಪಾಲ್ಗೊಂಡ 55 ಅರ್ಚಕರನ್ನು ಬೆಂಗಳೂರಿನ ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಗೌರವ ಸಮರ್ಪಿಸಿ ಮಾತನಾಡಿದರು.

ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವಿದ್ಯೆಯನ್ನು ಕಲಿತುಕೊಂಡು ನೀವು ಬಂದಿದ್ದೀರಿ. ಇದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗೋಣ. ಕಾವೇರಿ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ. ಕಾವೇರಿ ಆರತಿಯಲ್ಲಿ ಏನೆಲ್ಲ ಮಾಡಬಹುದು ಎನ್ನುವುದರ ಬಗ್ಗೆಯೂ ಸಲಹೆ ಸೂಚನೆಗಳನ್ನು ನೀಡಿ. ಅರ್ಚಕರ ಆಶೀರ್ವಾದ ಸದಾ ನಮ್ಮ ಸರ್ಕಾರದ ಮೇಲೆ ಇರಲಿ. ಒಳ್ಳೆಯ ಮಳೆ, ಬೆಳೆ ಬಂದು ರಾಜ್ಯ ಸುಭೀಕ್ಷೆಯಿಂದ ಇರಲಿ ಎಂದು ಎಲ್ಲ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಕಾವೇರಿ ಆರತಿ ಪ್ರಾರಂಭವಾಗಿದೆ. ಕಾವೇರಿ ಆರತಿ ಜನರ ಸಂಪತ್ತು ಆಗಬೇಕು, ಪ್ರಾರ್ಥನೆಯಾಗಬೇಕು, ಭಾವನೆಯಾಗಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ತಿಳಿಸಿದರು.

ಕಾವೇರಿ ಆರತಿ ಮೂಲಕ ನಾವು ಇಡೀ ನಾಡಿಗೆ ಹೊಸ ಸಂಪ್ರದಾಯವನ್ನು ಕೊಟ್ಟಿದ್ದೇವೆ. ಜೀವನದಿ ಕಾವೇರಿ ತಾಯಿಗೆ ಪೂಜೆ ಮಾಡುವಂತಹ ಭಾಗ್ಯ ನಮಗೆಲ್ಲರಿಗೂ ಸಿಕ್ಕಿತು. ಈ ಪರಂಪರೆಯನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಈ ಧಾರ್ಮಿಕ ಕಾರ್ಯಕ್ರಮವನ್ನು ಸಂಪ್ರದಾಯಬದ್ಧವಾಗಿ, ವೈಭವವಾಗಿ ಆಯೋಜಿಸಿದ್ದೇವೆ ಎಂದರು.

ರಾಜ್ಯದ ಎರಡೂವರೆ ಕೋಟಿ ಜನರಿಗೆ, ತಮಿಳುನಾಡಿಗೆ, ಕೇರಳಗೆ, ಪಾಂಡಿಚೇರಿಗೆ ಕಾವೇರಿ ನೀರು ಹೋಗುತ್ತದೆ. ಕುಡಿಯುವ ನೀರು, ವ್ಯವಸಾಯ ಹಾಗೂ ಕಾರ್ಖಾನೆಗಳಿಗೆ ಅನುಕೂಲವಾಗುತ್ತಿದೆ. ಆ ತಾಯಿಯನ್ನು ನಮಸ್ಕಾರ ಮಾಡಲು ಅನೇಕರು ಅಡಚಣೆ ಮಾಡುತ್ತಿದ್ದಾರೆ. ಆದರೆ ಯಾರಿಂದಲೂ ಕಾವೇರಿ ಆರತಿ ನಿಲ್ಲಿಸಲು ಸಾಧ್ಯವಿಲ್ಲ. ನೀವೆಲ್ಲರೂ ಆಶೀರ್ವಾದ ಮಾಡಲಿಕ್ಕೆ ಬಂದಿದ್ದೀರಿ. ಇದನ್ನು ನಾವು ಮುಂದುವರೆಸುತ್ತೇವೆ. ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗಲ್ಲ. ನಾವೆಲ್ಲರೂ ಸೇರಿಕೊಂಡು ಒಟ್ಟಿಗೆ ಪ್ರಾರ್ಥನೆ ಮಾಡೋಣ ಎಂದರು.

ಕಾವೇರಿ ಆರತಿಯನ್ನು ಉತ್ತಮವಾಗಿ ಮಾಡಿದ್ದೀರಿ. ಇನ್ನು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಿದ್ದೇವೆ. ಇಂತಹ ಭಕ್ತಿಪ್ರಧಾನವಾದ ಕಾರ್ಯಕ್ರಮವು ಜನರಿಗೆ ಆಕರ್ಷಣೀಯವಾಗಿ ತಲುಪಿಸಬೇಕು. ಕಾಶಿಗಿಂತ ನಮ್ಮಲ್ಲಿ ಪಾಂಡಿತ್ಯ ಏನೂ ಕಡಿಮೆ ಇಲ್ಲ ಎಂದು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ