Friday, September 20, 2024

ಪ್ರಾಯೋಗಿಕ ಆವೃತ್ತಿ

ಕುಂಭದ್ರೋಣ ಮಳೆ : ಜನಜೀವನ ಅಸ್ತವ್ಯಸ್ತ

ಕಳೆದ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಜನರು ತತ್ತರಿಸಿದ್ದಾರೆ.ನಗರದ ಹಲವೆಡೆ ಮಳೆನೀರು ಮನೆಗಳಿಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ- ಬರೆ, ಪಾತ್ರೆ ಸಾಮಾನುಗಳೆಲ್ಲ ಮುಳುಗಿಹೋಗಿದೆ. ಜನರು ಊಟ,ನಿದ್ರೆಯಿಲ್ಲದೆ ರಾತ್ರಿ ಪೂರಾ ಕಳೆದಿದ್ದಾರೆ.

ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆಗಳು ಕೊಚ್ಚಿ ಹೋಗಿದ್ದು,ಕೆಲವೆಡೆ ಜಮೀನು ತುಂಬಾ ನೀರು ತುಂಬಿ ಬೆಳೆಗಳು ಮುಚ್ಚಿ ಹೋಗಿದೆ.

ಮುಳುಗಿದ ವಿವೇಕಾನಂದ ಬಡಾವಣೆ

ನಗರದ ಕೆರೆ ಅಂಗಳದಲ್ಲಿರುವ ವಿವೇಕಾನಂದ ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದೆ.ಒಂದು ರೀತಿ ಜಲದಿಗ್ಭಂಧನ ವಿಧಿಸಿದಂತಾಗಿದ್ದು,ಇಲ್ಲಿನ ನಿವಾಸಿಗಳು ಮನೆಯ ಮೇಲೆ ಹತ್ತಿ ಕುಳಿತಿದ್ದಾರೆ.

ಪಕ್ಕದಲ್ಲಿರುವ ಚಿಕ್ಕ ಮಂಡ್ಯ ಕೆರೆ ಕೆರೆಯ ನೀರು ವಿವೇಕಾನಂದ ಬಡಾವಣೆಗೆ ನುಗ್ಗಿದೆ. ಅದರಲ್ಲೂ ಬೀಡಿ ಕಾರ್ಮಿಕರ ಬಡಾವಣೆ ಹೆಚ್ಚಿನ ಹಾನಿಗೀಡಾಗಿದೆ.ಮಳೆ ನೀರು ಎಲ್ಲಾ ಮನೆಗಳಗೆ ನುಗ್ಗಿದೆ.

ಎಲ್ಲಾ ಮನೆಗಳ ಮುಂದೆ ಮೂರು-ನಾಲ್ಕು ಅಡಿ ನೀರು ನಿಂತಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ಮುಳುಗಿದ್ದು, ಜನರು ರಾತ್ರಿ ಪೂರಾ ನಿದ್ದೆ ಇಲ್ಲದೆ ಮನೆಯ ಮಹಡಿಯ ಮೇಲೆ ವಾಸ ಮಾಡುವ ಭೀಕರ ಪರಿಸ್ಥಿತಿ ಉಂಟಾಗಿದೆ. ಕಾರು,ಬೈಕ್ ಗಳು ನೀರಿನಲ್ಲಿ ಮುಳುಗಿ ಹೋಗಿವೆ.

ಪದೇ ಪದೇ ಮಳೆಯಿಂದ ಬೀಡಿ ಕಾರ್ಮಿಕರ ಕಾಲೋನಿ ಮುಳುಗಡೆಯಾಗುತ್ತಿದ್ದರೂ ಜಿಲ್ಲಾಡಳಿತ, ಶಾಸಕ, ಸಂಸದೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಸದೆ ಸುಮಲತಾ ಅಂಬರೀಶ್, ಶಾಸಕ ಎಂ. ಶ್ರೀನಿವಾಸ್ ಈ ಜನಗಳ ಸಮಸ್ಯೆ ಬಗೆಹರಿಸಲು ಎಂದಿಗೂ ಪ್ರಯತ್ನ ಮಾಡಿಲ್ಲ.

ಪ್ರತಿ ಮಳೆಗಾಲದಲ್ಲೂ ಇಂತಹ ಭೀಕರ ಪರಿಸ್ಥಿತಿಯಲ್ಲಿ ದಿನಗಳನ್ನು ಬೆಳೆಯುವಂತಾಗಿದೆ. ಸಣ್ಣ ಸಣ್ಣ ಮಕ್ಕಳು ಶಾಲೆಗೆ ಹೋಗುವ ಮಕ್ಕಳು ಮಳೆ ಬಂತಂದರೆ ಹಿಡಿ ಶಾಪ ಹಾಕುವ ಸಂದರ್ಭ ಸೃಷ್ಟಿಯಾಗುತ್ತಿದ್ದರೂ, ನಮ್ಮ ಗೋಳು ಕೇಳಲು ಯಾರೂ ಬಂದಿಲ್ಲ. ಜಿಲ್ಲಾಡಳಿತ ಗಂಭೀರವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಅಳಲು.

ಸುಮಾರು 500 ಎಕರೆಗಿಂತಲು ಹೆಚ್ಚು ವಿಸ್ತೀರ್ಣದ ಮಂಡ್ಯದ ಕೆರೆಯನ್ನು ಮುಚ್ಚಿಸಿ ನಿವೇಶನಗಳನ್ನಾಗಿ ಮಾಡಿದ ಪರಿಣಾಮ, ಅಂದಿನಿಂದ ಇಂದಿನವರೆಗೂ ಇಲ್ಲಿ ವಾಸಿಸುವ ಜನರು ಮಳೆ ಬಂತೆಂದರೆ ಭಯ, ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಭಾಗದಲ್ಲಿ ಕೆರೆ ಇದ್ದಿದ್ದರೆ ಆ ಕೆರೆಗೆ ನೀರು ಹರಿದು ಹೋಗುತ್ತಿತ್ತು. ಈಗ ಕೆರೆಯನ್ನೇ ಮುಚ್ಚಿ ನಿವೇಶನ ಮಾಡಿದ್ದರ ಸಂಕಷ್ಟದ ಫಲವನ್ನು ಇಲ್ಲಿರುವ ಜನರು ಅನುಭವಿಸಲೇಬೇಕಾಗಿದೆ.

ಮಂಡ್ಯ-ನಾಗಮಂಗಲ ರಸ್ತೆಯಲ್ಲಿ ಸಾಕಷ್ಟು ನೀರು ವಿವೇಕಾನಂದ ಬಡಾವಣೆಯಿಂದ ಹರಿದು ಬಂದು ಒಂದು ಕಿಲೋಮೀಟರ್ ದೂರದವರೆಗೆ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ.

ನಗರದ ಕಾಳಿಕಾಂಬ ದೇವಸ್ಥಾನದ ಹಿಂಭಾಗದಲ್ಲಿರುವ ಕಾಳಿಕಾಂಬ ಸ್ಲಂ ಪ್ರದೇಶ ಸಂಪೂರ್ಣವಾಗಿ ಜಲಾವೃತವಾಗಿದ್ದು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಸಂಕಷ್ಟದಲ್ಲಿ ದಿನ ದೂಡುವಂತಾಗಿದೆ. ಮಳೆಗೆ ಮನೆಯ ಗೋಡೆಗಳು ತೇವದಿಂದ ಶಿಥಿಲವಾಗಿದ್ದು,ಬೀಳುವ ಭಯ ಇಲ್ಲಿನ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ನೀನು ಮಂಡ್ಯ ನಗರದ ಸುತ್ತಮುತ್ತಲ ಜಮೀನುಗಳಿಗೆ ಬಾರಿ ಪ್ರಮಾಣದ ನೀರು ನುಗ್ಗಿ ಬೆಳೆ ನಾಶವಾಗಿದ್ದು, ಜಮೀನಿನಲ್ಲಿ ನೀರು ನಿಂತಿರುವ ಕಾರಣ ಬೆಳೆ ನಾಶವಾಗುವ ಸ್ಥಿತಿ ತಲುಪಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!