ಭಾರತೀಯ ಭವ್ಯ ಪರಂಪರೆ ಹಾಗೂ ಕನ್ನಡ ಭಾಷಾ ಸಂಸ್ಕೃತಿ ಯನ್ನು ಅಮೇರಿಕಾದಲ್ಲಿ ನೆಲೆಗೊಳಿಸಿರುವ ಅಮೆರಿಕ ಕನ್ನಡ ಕೂಟಗಳ ಸಂಘದ ಅಧ್ಯಕ್ಷರಾಗಿರುವ ಮಧು ರಂಗಯ್ಯ ಅವರು ಸಕ್ಕರೆ ನಾಡು ಮಂಡ್ಯ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಬಣ್ಣಿಸಿದರು.
ಮಂಡ್ಯ ಜಿಲ್ಲೆಗೆ ಭೇಟಿ ನೀಡಿರುವ ಅಮೆರಿಕಾ ಕನ್ನಡ ಕೂಟಗಳ ಅಧ್ಯಕ್ಷ ಮಧು ರಂಗಯ್ಯ ಅವರನ್ನು ಮಂಡ್ಯ ನಗರದಲ್ಲಿ ಆತ್ಮೀಯವಾಗಿ ಅಭಿನಂದಿಸಿ ಮಾತನಾಡಿದ ಅವರು, ತವರು ನೆಲ ಕರ್ನಾಟದಿಂದ ಸಪ್ತಸಾಗರಗಳ ಆಚೆ ಇದ್ದರೂ ಸಹ ಅಮೆರಿಕಾದಲ್ಲಿ ನೆಲೆಸಿರುವ ಪ್ರತಿಯೊಬ್ಬರ ಕನ್ನಡಿಗರ ಮನದಲ್ಲಿ ಕನ್ನಡತನವಿದೆ. ತವರಿನ ಸೆಳೆತವಿದೆ. ಇದರಿಂದಾಗಿ ಅವರು ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಕನ್ನಡಿಗರೇ ಆದ ಅಮರ್ನಾಥ್ಗೌಡ ಅವರು ಎಲ್ಲ ಕನ್ನಡಿಗರನ್ನೂ ಒಗ್ಗೂಡಿಸಿ ಅಮೆರಿಕ ಕನ್ನಡ ಕೂಟಗಳ ಸಂಘವನ್ನು ಸ್ಥಾಪಿಸಿ ಇಡೀ ವಿಶ್ವದಲ್ಲೇ ಒಳ್ಳೆಯ ಸಮ್ಮೇಳನವನ್ನು ಆಯೋಜಿಸಿದ್ದರು. ಅದೇ ಮಾದರಿಯಲ್ಲಿ ಇತ್ತೀಚೆಗೆ ಆಯ್ಕೆಯಾದ ಮಧು ರಂಗಯ್ಯ ಅವರೂ ಸಹ ಕಾರ್ಯೋನ್ಮಖರಾಗಿದ್ದಾರೆ. ಕೇವಲ ಅಮೆರಿಕವಷ್ಟೇ ಅಲ್ಲದೆ, ಕನ್ನಡ ನಾಡಿನ ಎಲ್ಲ ಮೂಲೆಗಳನ್ನೂ ತಲುಪಿ ರಾಜ್ಯದಲ್ಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ತವಕದಲ್ಲಿದ್ದಾರೆ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.

ಮಧು ರಂಗಯ್ಯ ಅವರು ಮಂಡ್ಯನಗರದಲ್ಲೇ ವಿದ್ಯಾಭ್ಯಾಸ ಮಾಡಿ, ಆಡಿ ಬೆಳೆದಿದ್ದಾರೆ. ಆದ್ದರಿಂದಲೇ ಅವರು ನಮ್ಮ ಜಿಲ್ಲೆಯಿಂದಲೇ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಅಕ್ಕ ಬೆಳ್ಳಿ ಮಹೋತ್ಸವದ ಅಂಗವಾಗಿ ಮೊದಲ ಬಾರಿಗೆ ಮಂಡ್ಯ ನಗರದಲ್ಲಿ ಅಕ್ಕ ಚಾರಿಟಿ ಓಟ, ಅಮ್ಮನ ನಾಡಿನ ಅಕ್ಕರೆಯ ನಂಟು ಎಂಬ ಮ್ಯಾರಥಾನ್ ಏರ್ಪಡಿಸಿದ್ದಾರೆ. ಇದಕ್ಕೆ ಎಲ್ಲ ಸಾರ್ವಜನಿಕರು ಜೊತೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಅಭಿನಂದನೆ ಸ್ವೀಕರಿಸಿದ ಅಮೆರಿಕ ಕನ್ನಡ ಕೂಟಗಳ ಅಧ್ಯಕ್ಷ ಮಧು ರಂಗಯ್ಯ ಮಾತನಾಡಿ, ಮಂಡ್ಯದ ಸುಭಾಷ್ನಗರದಲ್ಲೇ ಬೆಳೆದಿದ್ದೆ. ಇಲ್ಲಿನ ಕಾರ್ಮೆಲ್ ಕಾನ್ವೆಂಟ್, ಕಾಳೇಗೌಡ ಪ್ರೌಢಶಾಲೆ, ಸರ್ಕಾರಿ ಕಾಲೇಜು, ನಂತರ ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ 26 ವರ್ಷಗಳ ಹಿಂದೆ ಉದ್ಯೋಗ ಅರಸಿ ಅಮೆರಿಕಾಕ್ಕೆ ತೆರಳಿದ್ದೆ. ನಮ್ಮ ಅಕ್ಕ ಸಂಘಟನೆಗೂ 25ರ ಬೆಳ್ಳಿ ಹಬ್ಬದ ಸಂಭ್ರಮ. ಇಂತಹ ಹೊತ್ತಿನಲ್ಲಿ ನಾನು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಿಸಿದೆ ಎಂದರು.
2 ಸಾವಿರ ಅಜೀವ ಸದಸ್ಯರನ್ನೊಳಗೊಂಡಿರುವ ಅಕ್ಕ ಸಂಘಟನೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಅಕ್ಕ ಸಮ್ಮೇಳನ ನಡೆಸಿ ಕನ್ನಡದ ನೆಲದಿಂದ ಪ್ರತಿಭಾವಂತರನ್ನು ಕರೆಸಿ ವೈದ್ಯರು, ಇಂಜಿನಿಯರ್ಗಳು, ಬಿಸಿನೆಸ್, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಬಗೆಯ ಎಲ್ಲ ಪ್ರಾಕಾರದ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಅಮೆರಿಕಾದಲ್ಲಿ ನೆಲೆಗೊಂಡಿರುವ ಹಲವಾರು ಕನ್ನಡಿಗರಿಗೆ ಸಮಸ್ಯೆಗಳು ಉದ್ಭವವಾಗುತ್ತವೆ. ಇದನ್ನು ಮನಗಂಡು 2 ಲಕ್ಷಕ್ಕೂ ಹೆಚ್ಚು ಮಂದಿ ಕನ್ನಡಿಗರು ವಾಸವಾಗಿದ್ದಾರೆ. ವೈದ್ಯರು, ಉದ್ದಿಮೆದಾರರು, ಉದ್ಯೋಗಿಗಳು ಸೇರಿದಂತೆ ಎಲ್ಲ ವರ್ಗದವರ ಪಟ್ಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಯೋಜನೆ ರೂಪಿಸಿದ್ದೇವೆ. ಜೊತೆಗೆ ಕನ್ನಡದ ನೆಲದಲ್ಲೂ ಅಕ್ಕ ಪ್ರತಿನಿಧಿಗಳು ಬಂದು ವಿವಿಧ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಹಮ್ಮಿಕೊಳ್ಳುವ ಆಲೋಚನ ಮಾಡಿದ್ದೇವೆ ಎಂದು ವಿವರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜು, ಮುಖಂಡರಾದ ವಸಂತ್, ಸಾತನೂರು ನಾಗ, ಬಾಬು ಗಂಗಡ್ಕರ್, ದೇವೇಗೌಡ, ಸಂಜಯ್, ಮಹೇಂದ್ರ, ಚೇತನ್, ಕನ್ನಡ ಸೇನೆ ಮಂಜುನಾಥ್ ಸೇರಿದಂತೆ ಇತರರು ಇದ್ದರು.




