Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕ ಜಾರಿಗೊಳಿಸಿ, ಕೃಷಿ ಕೂಲಿಕಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜಾಮೀನು ರಹಿತ ಸಾಲ, ಸಂಜೀವಿನಿ ಒಕ್ಕೂಟಗಳಿಗೆ ತಲಾ ಒಂದು ಕೋಟಿ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತಸಂಘದ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

  • ಬೇಡಿಕೆಗಳೇನು ?
  • 1) ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು, ತಕ್ಷಣದಲ್ಲಿ ಎಲ್ಲಾ ಕೂಲಿ ಕಾರ್ಮಿಕರಿಗೂ ಕೆಲಸ ನೀಡಬೇಕು, ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಬೇಕು ಹಾಗೂ ಬಾಕಿ ಇರುವ ಕಾಯಕ ಬಂಧುಗಳ ಪ್ರೋತ್ಸಾಹ ಧನ ನೀಡಬೇಕು.
  • 2) ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎನ್.ಎಂ.ಆರ್ ತೆಗೆದು ಏಳು ದಿನ ಮುಗಿದ ನಂತರ ತಕ್ಷಣದಲ್ಲಿ ಮತ್ತೆ ಎನ್.ಎಂ.ಆರ್ ತೆಗೆಯುವಂತೆ ಆಗಬೇಕು. ಎನ್.ಎಂ.ಆರ್ ನಡುವಿನ ಅಂತರವನ್ನು ಕೈಬಿಡಬೇಕು ಹಾಗೂ ಕೆಲಸದ ಸ್ಥಳಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು.
  • 3) ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿಯನ್ನು 600 ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ವಾರ್ಷಿಕ ಕನಿಷ್ಠ 200 ದಿನಗಳಿಗೆ ಕೆಲಸ ಹೆಚ್ಚಳ ಮಾಡಬೇಕು.
  • 4) ಹಲವಾರು ತಾಂತ್ರಿಕ ಸಮಸ್ಯೆಗಳ ನೆಪ ಒಡ್ಡಿ ಕೂಲಿಕಾರ್ಮಿಕರಿಗೆ ಕೆಲಸ ನೀಡಲು ನಿರಾಕರಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
  • 5) ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಕ್ಕೆ ಒಂದು ಕೋಟಿ ಹಣ ಬಿಡುಗಡೆ ಮಾಡಬೇಕು ಹಾಗೂ ಗುಂಪುಗಳಿಗೆ ಕಚ್ಚಾ ವಸ್ತುಗಳನ್ನು ನೀಡಿ, ತರಬೇತಿ ನೀಡಿ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು.
  • 6) ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರ ನೀಡಬೇಕು.
  • 7) ಜನಸಾಮಾನ್ಯರಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜಾಮೀನು ರಹಿತ ಸಾಲವನ್ನು ಮಂಜೂರು ಮಾಡಬೇಕು.
  • 8) ಜಿಲ್ಲೆಯಾದ್ಯಂತ ರದ್ದು ಮಾಡಲಾಗಿರುವ ಬಿಪಿಎಲ್ ಪಡಿತರ ಚೀಟಿಗಳ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಸಿ ಅರ್ಹರ ಪಡಿತರ ಚೀಟಿಗಳನ್ನು ಪುನರ್ ಸ್ಥಾಪಿಸಬೇಕು.
  • 9) ಬಗರ್‌ಹುಕುಂ ಸಾಗುವಳಿದಾರರು ಅನುಭವದಲ್ಲಿರುವ ಜಮೀನುಗಳನ್ನು ಅಕ್ರಮವಾಗಿ ಬೇರೆಯವರಿಗೆ ಪೋಡಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರು ಹಕ್ಕುಪತ್ರ ವಿತರಣೆ ಮಾಡಬೇಕು.
  • 10) ಗ್ರಾಮೀಣ ಭಾಗದ ಹಳ್ಳಿಗಳಿಗೆ ಬಸ್ ಸೌಲಭ್ಯ ಇಲ್ಲದೆ ಶಾಲೆ, ಕಾಲೇಜು, ದಿನನಿತ್ಯ ದುಡಿಯಲು ಹೋಗುವ ಜನರಿಗೆ ತೊಂದರೆಯಾಗುತ್ತಿದೆ. ತಕ್ಷಣದಲ್ಲೇ ಸರ್ವೆ ಮಾಡಿ ಎಲ್ಲ ಹಳ್ಳಿಗಳಿಗೆ ಬಸ್ ಸೌಲಭ್ಯ ನೀಡಬೇಕು.
  • 11) ಸಣ್ಣ ಪುಟ್ಟ ತಾಂತ್ರಿಕ ಕಾರಣಗಳಿಂದ ತಡೆಹಿಡಿಯಲಾಗಿರುವ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳನ್ನ ಮುಂದುವರಿಸಲು ತಕ್ಷಣ ಅಗತ್ಯ ಕ್ರಮ ವಹಿಸಬೇಕು.
  • 12) ಪೋಡಿಯಾಗದ ರೈತರ ಜಮೀನುಗಳನ್ನು ದುರಸ್ತು ಮಾಡಿ ಪೋಡಿ ಮಾಡಿಕೊಡಬೇಕು.13) ಮಳವಳ್ಳಿ ತಾಲ್ಲೂಕು ಮಲ್ಲಿಕ್ಯಾತನಹಳ್ಳಿ ಹಾಗೂ ಬ್ಲಫ್ ಗ್ರಾಮಗಳಿಗೆ ಕಾವೇರಿ ನದಿಯ ಕಚ್ಚಾ ನೀರನ್ನ ಪೂರೈಕೆ ಮಾಡುತ್ತಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು .
  • 14) NH 948 ನಿಂದ ಮಲ್ಲಿಕ್ಯಾತನಹಳ್ಳಿ ಕಡೆಗೆ ಹೋಗುವ ತಿರುವಿನಲ್ಲಿ ರಸ್ತೆ ಡುಬ್ಬು ಅಳವಡಿಸಬೇಕು ಹಾಗೂ ಅಲ್ಲಿ ಬೀದಿ ದೀಪದ ವ್ಯವಸ್ಥೆ ಮಾಡಬೇಕು.
  • 15) ಸರ್ಕಾರಿ ಅಸ್ಪತ್ರೆಗಳಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧ ಕೇಂದ್ರವನ್ನ ಪುನಃ ಸ್ಥಾಪಿಸಬೇಕು. ಬಡ ರೋಗಿಗಳಿಗೆ ಗುಣಮಟ್ಟದ ಔಷಧಿಯನ್ನು ರಿಯಾಯಿತಿ ದರದಲ್ಲಿ ನೀಡಬೇಕೆಂದು ಬೇಡಿಕೆ ಮುಂದಿಟ್ಟರು.
    ಪ್ರತಿಭಟನೆಯಲ್ಲಿ ಜನವಾದಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷರಾದ ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್, ಮುಖಂಡರಾದ ಎನ್.ಲಿಂಗರಾಜಮೂರ್ತಿ ಹಾಗೂ ಪ್ರಮೀಳಾ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ