ಸವಿತಾ ಸಮಾಜದ ವಿರುದ್ದ ನಾಲಿಗೆ ಹರಿಯ ಬಿಟ್ಟಿರುವ ಬಿಜೆಪಿ ನಾಯಕ ಸಿ.ಟಿ.ರವಿ ವಿರುದ್ದ ಮಂಡ್ಯನಗರದ ಸಂಜಯ ಸರ್ಕಲ್ ನಲ್ಲಿ ಸವಿತಾ ಸಮಾಜ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಎಂ.ಎಲ್.ಸಿ ಆಗಿದ್ದ ವ್ಯಕ್ತಿ ಇಂತಹ ಮಾತುಗಳನ್ನು ಆಡ್ತಾನೆ ಅಂದ್ರೆ ಅವರಿಗೆ ಹಿಂದುಳಿದವರ ಮೇಲೆ ಎಷ್ಟು ದಬ್ಬಾಳಿಕೆ ನಡೆದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ದಸಂಸ ರಾಜ್ಯ ಸಂಚಾಲಕ ಕೆರಗೋಡು ಗುರುಪ್ರಸಾದ್ ಹೇಳಿದರು.
ದೇವರಾಜು ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಜಾತಿವಾದಿ, ಹಿಂದುಳಿದ ವರ್ಗಗಳ ವಿರೋಧಿಯಾಗಿರುವ ಸಿ.ಟಿ.ರವಿ ಸವಿತಾ ಸಮುದಾಯವನ್ನು ಅವಮಾನಿಸಿದ್ದಾರೆ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎನ್ನುವ ಸಿ.ಟಿ.ರವಿ, ಹಿಂದುಳಿದ ವರ್ಗಗಳನ್ನು ಅವಮಾನಿಸಿದ್ದಾರೆಂದು ಕಿಡಿಕಾರಿದರು.
ಸಿ ಟಿ ರವಿ ರವರು ಸವಿತಾ ಸಮಾಜದ ಕುರಿತು ನಿಷೇಧಿತ ಪದ ಬಳಕೆ ಮಾಡಿದ್ದಾರೆ. ಅವರ ಮಾತು ಹಿಂದುಳಿದ ಸವಿತಾ ಸಮಾಜದ ಬಗ್ಗೆ ಅವರಿಗಿರುವ ಅಸಡ್ಡೆಯನ್ನು ತೋರ್ಪಡಿಸುತ್ತದೆ ತಾಳಶಾಸನ ಮೋಹನ್ ತಿಳಿಸಿದರು.
ಪ್ರತಿಭಟನೆಯಲ್ಲಿ ಕುರುಬರ ಸಂಘದ ಮಾಜಿ ಅಧ್ಯಕ್ಷ ನಾಗರಾಜು, ವಕೀಲ ಚೀರನಹಳ್ಳಿ ಲಕ್ಷ್ಮಣ್, ಸವಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್, ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುತ್ತುರಾಜ್, ಕ್ಷೌರಿಕ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ. ಬಿ. ಶಿವಕುಮಾರ್ , ಜಯರಾಮ್, ಸೋಮು ಹಾಗೂ ನಾಗರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




