Thursday, November 19, 2026

ಪ್ರಾಯೋಗಿಕ ಆವೃತ್ತಿ

ದಕ್ಕಿದಷ್ಟಕ್ಕೇ ತೃಪ್ತಿಪಟ್ಟುಕೊಂಡರೆ ಜೀವನದಲ್ಲಿ ಸುಖ – ಶಾಂತಿ : ಸಂತೋಷ್ ಹೆಗ್ಗಡೆ

ಮನುಷ್ಯ ತನಗೆ ದಕ್ಕಿದಷ್ಟಕ್ಕೇ ತೃಪ್ತಿಪಟ್ಟುಕೊಂಡರೆ ತನ್ನ ಜೀವನದಲ್ಲಿ ಸುಖ ಶಾಂತಿಯನ್ನು ಕಾಣಬಹುದು. ಇಲ್ಲದಿದ್ದರೆ ಭ್ರಷ್ಟಾಚಾರ ನಡೆಸಿ ಅಶಾಂತಿಯಿಂದ ನರಳಬೇಕಾಗುತ್ತದೆ ಎಂಬುದಕ್ಕೆ ದೇಶದಲ್ಲಿ ನಡೆದಿರುವ ಹಲವಾರು ಹಗರಣಗಳೇ ಸಾಕ್ಷಿ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಎಚ್ಚರಿಸಿದರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಕನ್ನಡಸೇನೆ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಕನ್ನಡ ಜಾಗೃತಿ ಸಮಾವೇಶ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬೋಫರ‍್ಸ್ ಸೇರಿದಂತೆ ನಡೆದಿರುವ ಬಹುತೇಕ ಹಗರಣಗಳು ಲಕ್ಷ ಲಕ್ಷ ಕೋಟಿಯಲ್ಲಿವೆ. ಅವರೆಲ್ಲ ನೂರಾರು ವರ್ಷ ಬಾಳಿ ಬದುಕಿದವರೇನಲ್ಲ. ಇವತ್ತಿಗೂ ನಮ್ಮ ರಾಜ್ಯದಲ್ಲಿ ೪೦ ಪರ್ಸೆಂಟ್ ೬೦ ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆಡಳಿತ ವಿರೋಧ ಪಕ್ಷಗಳವರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಪ್ರದಾನಿ ದಿ.ರಾಜೀವ್‌ಗಾಂಧಿಯವರು ೧೯೮೫ರಲ್ಲೇ ಒಂದು ಮಾತು ಹೇಳಿದ್ದರು. ನಾನು ಪ್ರದಾನಿಯಾಗಿ ಒಂದು ರೂ.ಬಿಡುಗಡೆ ಮಾಡಿದರೆ, ೧೮ ಪೈಸೆಯಷ್ಟು ಮಾತ್ರ ಕೆಲಸವಾಗಿರುತ್ತದೆ ಎಂದು ಭ್ರಷ್ಟಾಚಾರದ ವಿರಾಟ್ ದರ್ಶನ ಮಾಡಿಸಿದ್ದರು. ಹಾಗಾಗಿ ಪ್ರತಿಯೊಬ್ಬರಲ್ಲೂ ತೃಪ್ತಿ ಎಂಬುದಿದ್ದರೆ ದುರಾಸೆ ಬರೊಲ್ಲ. ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡರೆ ಸಂತೃಪ್ತ ಬದುಕು ನಮ್ಮದಾಗುತ್ತದೆಂದರು.

ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ, ೧೯ ಸಾವಿರ ಭಾಷೆಗಳಿರುವ ಭಾರತದ ನೆಲದಲ್ಲಿ ಕೇವಲ ೨೨ ಭಾಷೆಗಳು ಮಾತ್ರ ಅಧಿಕೃತವಾಗಿವೆ ಎಂದು ಹೇಳಿದರು.

ಇಂತಹ ನೆಲದಲ್ಲಿ ಜನತೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರಿಹೋದರೆ ಮಾತ್ರ ಸಮಾಜ ಉನ್ನತಿಗೊಳ್ಳುತ್ತದೆ. ಎಲ್ಲಿ ಹಕ್ಕಿರುತ್ತದೊ ಅಲ್ಲಿ ಕರ್ತವ್ಯವಿರುತ್ತದೆ. ಎಲ್ಲಿ ಕರ್ತವ್ಯ ಇರುತ್ತದೋ ಅಲ್ಲಿ ಜವಾಬ್ದಾರಿ ಇರುತ್ತದೆಂದ ಅವರು, ೩೦ ಕೋಟಿ ಜನರು ಇಂದಿಗೂ ಕಡುಬಡತನದಲ್ಲಿದ್ದಾರೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜನರು ಇದರ ವಿರುದ್ಧ ಹೋರಾಡಬೆಕೆಂದರು.

ಕನ್ನಡ ಬಗ್ಗೆ ಮಾತನಾಡುವವರು ಎಷ್ಟು ಜನ ಪುಸ್ತಕ ಕೊಂಡು ಓದಿದ್ದಾರೆಂದು ಪ್ರಶ್ನಿಸಿದ ರತ್ನಾಕರ್ ಅವರು, ಕನ್ನಡ ಭಾಷೆಯೊಂದೇ ಪ್ರಪಂಚಕ್ಕೇ ಒದಗಿಸುವಷ್ಟು ಸಾಹಿತ್ಯವನ್ನು ಹೊಂದಿದೆ. ಹಾಗಾಗಿ ಕನ್ನಡ ಹೋರಾಟಗಾರರು ಕೂಡ ನಿತ್ಯ ಒಂದೊಂದು ಪುಸ್ತಕ ಓದುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೆತ್ರಗಳ ಸಾಧಕರನ್ನು ಗುರುತಿಸಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಕನ್ನಡ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಶಾಸಕ ಪಿ.ರವಿಕುಮಾರ್, ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ, ಚಿತ್ರನಟ ಟೆನ್ನಿಸ್‌ಕೃಷ್ಣ, ಕನ್ನಡಸೆನೆ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್ ಮತ್ತಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ ವಿವಿಧ ಕಲಾ ತಂಡಗಳೊಂದಿಗೆ ಸಾಗಿದ ಕನ್ನಡದ ಮೆರವಣಿಗೆ ಗಾಂಧಿ ಭವನದಲ್ಲಿ ಸಂಪನ್ನಗೊಂಡಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ