Sunday, November 22, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲಾಧಿಕಾರಿಗಳು ತಾವಷ್ಟೇ ಪ್ರಾಮಾಣಿಕರಾದರೆ ಸಾಲದು…..

ಈ ಹಿಂದೆ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸಂಜೀವ್ ಕುಮಾರ್ ಅವರು ರೈತ ಮಂಜೇಗೌಡನ ಸಾವಿನ ಪ್ರಕರಣದ ಸಂಬಂಧ ಈಗ ಮತ್ತೊಮ್ಮೆ ನೆನಪಾಗುತ್ತಿದ್ದಾರೆ. ಅವರು ಡಿಸಿ ಆಗಿ ಜಿಲ್ಲೆಗೆ ಬಂದ ಹೊಸದರಲ್ಲಿ ಗೆಜ್ಜಲಗೆರೆ ಡೈರಿಯ ದಿನಗೂಲಿ ನೌಕರರು ತಮ್ಮನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕಾರ್ಖಾನೆಯ ಆವರಣದಲ್ಲಿ ಧರಣಿ ಕುಳಿತಿದ್ದರು.

ಧರಣಿ ನಿರತರು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲೂ ಪ್ರತಿಭಟನೆ ದಾಖಲಿಸಲು ಆಗಮಿಸಿದ್ದರು. ರೈತ ಸಂಘದ ದಿವಂಗತ ವಳಗೇರೆಹಳ್ಳಿ ಅಶೋಕ್ ಅವರು ಮತ್ತು ನಾನು ಚಳುವಳಿ ನಿರತರ ವಕ್ತಾರರಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದೆವು. ಅದು ಡೈರಿಯ ಆಂತರಿಕ ವಿಚಾರ. ನನ್ನ ಪ್ರವೇಶದಿಂದ ಸಹಾಯವಾದೀತೋ, ಇಲ್ಲವೋ ಗೊತ್ತಿಲ್ಲ. ಪ್ರಕರಣಕ್ಕೆ ತಿರುವಂತೂ ಸಿಕ್ಕಬಹುದೇನೋ ನೋಡೋಣ ಎಂದರು.

“ಡೈರಿಯ ಪದಾಧಿಕಾರಿಗಳು, ನಿರ್ದೇಶಕರು, ಮ್ಯಾನೇಜಿಂಗ್ ಡೈರೆಕ್ಟರ್ ಇವರನ್ನೆಲ್ಲ ಇಲ್ಲಿಗೇ ಕರೆಸೋಣ. ಚಳುವಳಿಗಾರರನ್ನು ಕರೆಸಿ” ಅಂತ ಜಿಲ್ಲಾಧಿಕಾರಿ ಸಂಜೀವ್ ಕುಮಾರ್ ಅದಕ್ಕೊಂದು ದಿನಾಂಕ ನಿಗದಿ ಮಾಡಿ ಮೀಟಿಂಗ್ ಕರೆಸಿದ್ದರು. ಅಂದು ಇದ್ದ ಡೈರಿಯ ಪ್ರಮುಖ ಅಧಿಕಾರಿಯೊಬ್ಬರು ನಾನು ಅವರ ಹೆಸರನ್ನು ಮರೆತಿದ್ದೇನೆ .ಆತ ಅಂದು ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಬಹಳ ಉದ್ದಟತನದಿಂದ ಮಾತನಾಡಿದರು. ಇದು ಡೈರಿಯ ಆಂತರಿಕ ವಿಚಾರ ಇದರಲ್ಲಿ ಜಿಲ್ಲಾಧಿಕಾರಿಗಳ ಪಾತ್ರವೇನು ಇರುವುದಿಲ್ಲ ಹಾಗೆ.. ಹೀಗೆ.. ಅಂತ ಏರು ಧ್ವನಿಯಲ್ಲಿ ವರಾತ ತೆಗೆದಿದ್ದರು.

ಜಿಲ್ಲಾಧಿಕಾರಿ ಸಂಜೀವ್ ಕುಮಾರ್ ಅವರು ಬಹಳ ಮೃದುಭಾಷಿ, ಅವರು ಹೇಳಿದ್ದಿಷ್ಟೇ “ಹೌದು ಮಿಸ್ಟರ್ ನೀವು ಹೇಳಿದ್ದು ಸರಿ, ಆದರೆ ಜಿಲ್ಲೆಯ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಆಗಿ ಸ್ವಲ್ಪ ಕಾಳಜಿ ವಹಿಸುತ್ತಿದ್ದೇನೆ ಅಷ್ಟೇ, ಚಳುವಳಿಗಾರರು ಶಾಂತಿ ಭಂಗಕ್ಕೆ ಕಾರಣರಾದರೆ ಆಮೇಲೆ ಜಿಲ್ಲಾಡಳಿತದ ಮೇಲೆ ತಾವು ಗೂಬೆ ಕೂರಿಸಬಾರದು” ಅಂತ ತಮಗಿದ್ದ ಕಾನೂನುಬದ್ಧ ಅಧಿಕಾರವನ್ನು ಉಪಯೋಗಿಸಿದರು.

ಇನ್ನೊಂದಿಷ್ಟು ಚರ್ಚೆಯ ನಂತರ ಸಭೆ ಬರಕಾಸ್ತ್ ಆಯ್ತು , ಚಳುವಳಿಗಾರರು ಸಭೆ ಮುಗಿಸಿ ಹೊರ ಬಂದಾಗ, ಕೊನೇಲಿ “ಜಿಲ್ಲಾಧಿಕಾರಿಗಳು ಅದೇನೋ ಹೇಳಿದ್ರಲ್ಲ ಏನು ಸರ್ ಅದು” ಅಂತ ಪ್ರತಿಭಟನಾಕಾರರು ಕೇಳಿದರು. ಅವರು ಸೂಚ್ಯವಾಗಿ ಹೇಳಿದ್ದನ್ನು ನಾನು ಅವರಿಗೆ ಬಿಡಿಸಿ ಹೇಳಿದೆ ಅಷ್ಟೇ, ಆ ಉದ್ದಟ ಅಧಿಕಾರಿಗೆ ಚಳುವಳಿಗಾರರು ಆಮೇಲೆ ಮುಟ್ಟಿ ನೋಡಿಕೊಳ್ಳುವಂತೆ ಲಾತಾ ಕೊಟ್ಟಿದ್ದರಂತೆ.

ಮತ್ತೊಂದು ಸಲ ನಾನು ಸಂಜೀವ್ ಕುಮಾರ್ ರವರ ಚೇಂಬರಿಗೆ ಯಾವುದೋ ಸಾರ್ವಜನಿಕ ಹಿತಾಸಕ್ತಿಯ ವಿಚಾರ ತೆಗೆದುಕೊಂಡು ಮಾತನಾಡಲು ಹೋದಾಗ ಇದ್ದಕ್ಕಿದ್ದಂತೆ

“ಹ್ಞಾಂ! ವಿಶ್ವನಾಥ್, ಎಸಿ ಅವರ ಬಗ್ಗೆ ಏನಾದರೂ ದೂರು ಕೇಳಿಸಿಕೊಂಡಿದ್ದೀರಾ ಜನರ ಹತ್ತಿರ” ಅಂದರು. ಅವತ್ತಿದ್ದ ಉಪ ವಿಭಾಗಾಧಿಕಾರಿಗಳು ಬಹಳ ಸೋಮಾರಿಯಾಗಿದ್ದರು. ಅವರ ಮುಂದೆ ಇದ್ದ ಕೇಸುಗಳು ವೇಗವಾಗಿ ಮುಗಿಯುತ್ತಿರಲಿಲ್ಲ, ಅಂದ್ರೆ fast disposal ಇರಲಿಲ್ಲ. ನಾನು ಅಷ್ಟನ್ನು ಹೇಳಿ ನನ್ನ ಕೆಲಸ ಮುಗಿಸಿ ನನ್ನ ಕಚೇರಿಗೆ ಹೊರಟುಬಂದೆ.

ಬಿ.ಟಿ.ವಿಶ್ವನಾಥ್

ಮೂರೇ ದಿನದಲ್ಲಿ ಮಂಡ್ಯದ ಉಪ ವಿಭಾಗಾಧಿಕಾರಿಗಳ ಹತ್ತಿರ ಇದ್ದ ಎಲ್ಲಾ ಕೇಸುಗಳನ್ನು ಸ್ವತಃ ಜಿಲ್ಲಾಧಿಕಾರಿಗಳೇ ತರಿಸಿಕೊಂಡು ವಿಚಾರಣೆ ಶುರು ಮಾಡಿಬಿಟ್ಟಿದ್ದರು. ಈಗಿನ ಜಿಲ್ಲಾಧಿಕಾರಿಗಳಾದ ಡಾ.ಕುಮಾರ್ ಅವರೂ ಸಜ್ಜನರು. ಬಡವರ ಸಮಸ್ಯೆಯನ್ನು ಆಲಿಸುತ್ತಾರೆ, ಸ್ಪಂದಿಸುತ್ತಾರೆ. ಆದರೆ, ಭ್ರಷ್ಟರು, ದಪ್ಪ ಚರ್ಮದ ಕೈ ಕೆಳಗಿನ ಅಧಿಕಾರಿಗಳತ್ತ ಸ್ವಲ್ಪ ಚಾಟಿ ಬೀಸಬೇಕು ಅಷ್ಟೇ.

ಹಾಗಾದಾಗ ಮಾತ್ರ ಇಡೀ ರಾಜ್ಯವೇ ಮರುಗಿದ ರೈತ ಮಂಜೇಗೌಡನಂಥ ಜನಸಾಮಾನ್ಯರ ಸಾವುನೋವುಗಳನ್ನು ತಪ್ಪಿಸಬಹುದು. ಕಾರ್ಯಾಂಗದ ಅಧಿಕಾರ ವ್ಯವಸ್ಥೆಯಲ್ಲಿ ಮೇಲಿನವರು ತುಸು ಬಿಗಿಯಾಗಿದ್ದರೆ ಮಾತ್ರ ಕೆಳಹಂತದ ಸರ್ಕಾರಿ ನೌಕರರು ಜನಸಾಮಾನ್ಯರ ಕೆಲಸಗಳನ್ನು ನಿಗಧಿತ ಸಮಯಕ್ಕೆ ಮುಗಿಸುತ್ತಾರೆ. ವ್ಯವಸ್ಥೆ ಸುಧಾರಿಸಬೇಕಾದರೆ ಜಿಲ್ಲಾಧಿಕಾರಿಗಳು ತಮ್ಮ ಅಪರಿಮಿತ ಅಧಿಕಾರವನ್ನು ಧನಾತ್ಮಕವಾಗಿ ಬಳಸಬೇಕು. ಮೃತ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟು ಸುಮ್ಮನಾಗುವುದಷ್ಟರಿಂದ ವ್ಯವಸ್ಥೆಯ ಸಮಸ್ಯೆ ಪರಿಹಾರವಾಗುವುದಿಲ್ಲ ಸರ್ಕಾರಿ ವ್ಯವಸ್ಥೆಯನ್ನು ರೈತಪರವಾಗಿ, ಜನಪರವಾಗಿ ಕೆಲಸ ಮಾಡುವಂತೆ ರೂಪಿಸುವುದು ಹೆಚ್ಚು ಅರ್ಥಪೂರ್ಣ.

ಲೇಖಕರು: ಬಿ.ಟಿ.ವಿಶ್ವನಾಥ್
ಅಧ್ಯಕ್ಷರು, ಅಖಿಲ ಭಾರತ ವಕೀಲರ ಒಕ್ಕೂಟ, ಮಂಡ್ಯ ಜಿಲ್ಲೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ