ಸಾಮಾಜಿಕ ಬದ್ಧತೆಯುಳ್ಳ ಯುವ ಕವಿಗಳು ಹೊರಬರಲಿ ಎಂದು ಹಿರಿಯ ಸಾಹಿತಿ ಡಾ.ಪ್ರದೀಪ ಕುಮಾರ ಹೆಬ್ರಿ ತಿಳಿಸಿದರು.
ಮಂಡ್ಯ ನಗರದ ಗಾಂಧಿನಗರದಲ್ಲಿರುವ ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ಲೋಕೇಶ್ ಕಲ್ಕುಣಿ ಅವರ ಕಾವೇರಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕವಿಗಳಿದ್ದಾರೆ. ಆದರೆ ಸಾಮಾಜಿಕ ಬದ್ಧತೆ ಇರುವ ಕವಿಗಳು ಇನ್ನಷ್ಟು ಹೊರಬರಬೇಕೆಂದು ಹೇಳಿದರು.
ಯಾವ ಕವಿಗೆ ಭಾಷೆ ಮೇಲೆ ಹಿಡಿತವಿರುತ್ತದೋ ಅಂತಹ ಕವಿ ಮಾತ್ರ ಹೆಚ್ಚು ಓದುಗರನ್ನು ತಲುಪುತ್ತಾನೆ.
ಪ್ರಸ್ತುತ ದಿನಗಳಲ್ಲಿ ಓದುವವರ ಸಂಖ್ಯೆಯೇ ಕಡಿಮೆ ಇರುವಾಗ ನಾವು ಬರೆದ ತಕ್ಷಣ ಎಲ್ಲರಿಗೂ ತಲುಪುತ್ತದೆ, ಬದಲಾವಣೆ ಆಗುತ್ತದೆ ಎಂದು ತಿಳಿಯಬಾರದು.
ನಮ್ಮಲ್ಲಿರುವ ಭಾವನೆಗಳನ್ನು ಬಿತ್ತುವುದಷ್ಟೆ ನಮ್ಮ ಕೆಲಸ. ಅವು ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯಿಂದ ಕೂಡಿರಬೇಕು ಎಂದರು.
ಉತ್ತಮ ಭಾಷಾ ಜ್ಞಾನವಿದ್ದರೆ 100 ಪುಟಗಳಲ್ಲಿ ಹೇಳುವುದನ್ನು ಕೇವಲ 8 ಮಾತುಗಳಲ್ಲಿ ಓದುಗನ ಮನ ಮುಟ್ಟುವಂತಹ ಪ್ರಯತ್ನವನ್ನ ಒಬ್ಬ ಕವಿ ಮಾಡಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಲೋಕೇಶ್ ಅವರು ವೃತ್ತಿ ಜೊತೆಗೆ ಪ್ರವೃತ್ತಿಯಾಗಿ ಕೆಲಸದ ಒತ್ತಡದ ನಡುವೆಯೂ ಕವನ ಸಂಕಲನ ರಚಿಸಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗದಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಇಬ್ಬರು ಸಿಬ್ಬಂದಿಗಳ ರಚಿಸಿದ ಪುಸ್ತಕ ಬಿಡುಗಡೆ ಮಾಡುವ ಅವಕಾಶ ಸಿಕ್ಕಿತ್ತು. ಇದೀಗ ಮಂಡ್ಯದಲ್ಲಿ ಇಂತಹದೊಂದು ಅವಕಾಶ ಸಿಕ್ಕಿದೆ. ಮೇಲಾಧಿಕಾರಿಗಳು ಇಂತಹ ಕೆಲಸಗಳಿಗೆ ಸ್ಪೂರ್ತಿ ತುಂಬಬೇಕು. ಆ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಇಂತಹ ಸಾಹಿತಿಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಪೊಲೀಸ್ ಸಿಬ್ಬಂದಿಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಒತ್ತಡಗಳಿರುತ್ತವೆ. ಈ ಎಲ್ಲಾ ಒತ್ತಡಗಳ ನಡುವೆ ನಮ್ಮ ಸಿಬ್ಬಂದಿಯೊಬ್ಬರೂ ಕವನ ಸಂಕಲನ ಪುಸ್ತಕ ಬರೆದು ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಡಾ.ಹೆಚ್.ಆರ್.ಕನ್ನಿಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತಿಗಳು ಕೇವಲ ಪ್ರಶಸ್ತಿಗಾಗಿ ಪುಸ್ತಕಗಳನ್ನು ರಚಿಸಬೇಡಿ, ಆತ್ಮತೃಪ್ತಿಗಾಗಿ ಬರೆಯಿರಿ ಎಂದರು. ಪ್ರತಿಯೊಬ್ಬರಲ್ಲೂ ಒಬ್ಬೊಬ್ಬ ಕವಿ ಇರುತ್ತಾನೆ. ಬರೆಯುವ ಆಸಕ್ತಿ ರೂಢಿಸಿಕೊಳ್ಳಿ, ಪುಸ್ತಕಗಳಿಗಿಂತ ಮತ್ತೊಬ್ಬ ಸ್ನೇಹಿತ ಯಾರು ಇಲ್ಲ ಎಂದು ಹೇಳಿದರು.
ಕವಿ ಲೋಕೇಶ್ ಕಲ್ಕುಳಿ,ಕಸಾಪ ಅಧ್ಯಕ್ಷ ರವಿಕುಮಾರ್ ಮತ್ತಿತರರಿದ್ದರು.