ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಕೆರೆ ಕೋಡಿ ಬಿದ್ದ ಪರಿಣಾಮ ಗ್ರಾಮದ ಸುತ್ತಮುತ್ತ ಜಮೀನುಗಳಿಗೆ ನೀರು ನುಗ್ಗಿ ಭಾರೀ ನಷ್ಟ ಸಂಭವಿಸಿದೆ.
ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಕಳೆದ ರಾತ್ರಿಯಿಡೀ ಊಟ, ನಿದ್ರೆ ಇಲ್ಲದೆ ದಿನ ಕಳೆಯುವಂತಾಗಿತ್ತು.ಮನೆಗೆ ನುಗ್ಗಿದ್ದ ನೀರನ್ನು ಹೊರ ಹಾಕುತ್ತಿದ್ದ ಜನರು ಮಳೆಗೆ ಶಾಪ ಹಾಕುತ್ತಿದ್ದರು. ವೃದ್ಧರು, ಮಕ್ಕಳು ಮಳೆಯ ನೀರು ಮನೆಗೆ ನುಗ್ಗಿದ ಪರಿಣಾಮ ಸಾಕಷ್ಟು ಪರದಾಡಿದರು.
ಹೊಳಲಿನ ತಾಂಡವೇಶ್ವರ ಸ್ವಾಮಿ ದೇವಾಲಯ, ಸಾರ್ವಜನಿಕ ಸ್ಮಶಾನದ ರಸ್ತೆ, ಹೊಳಲು- ಶಿವಳ್ಳಿ- ಮಂಡ್ಯ ಸಂಪರ್ಕ ರಸ್ತೆಯ ಮೇಲೆ ನಾಲ್ಕರಿಂದ ಐದು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದ ಕಾರಣ ದ್ವಿಚಕ್ರ ವಾಹನ ಸವಾರರು ಭಯದಿಂದ ಆ ರಸ್ತೆಯನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಸಾಗಿದರು. ಮಳೆಯಿಂದ ಹಾನಿಯಾಗಿರುವ ಚಿತ್ರಗಳನ್ನು ನೋಡುತ್ತಿದ್ದರೆ ಹೊಳಲು ಸುತ್ತಮುತ್ತ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದು ತಿಳಿಯುತ್ತದೆ.




