ಕರ್ನಾಟಕ ರಾಜ್ಯದಲ್ಲಿ ಶೇ.58 ರಷ್ಟು ರೈತಾಪಿ ವರ್ಗವಿದ್ದು, ಅದರಲ್ಲಿ ಶೇ.85ರಷ್ಟು ಸಣ್ಣ ಹಿಡುವಳಿದಾರರಿದ್ದಾರೆ. ರಾಜ್ಯದ ಆರ್ಥಿಕತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಬಿಜೆಪಿ ತಂದಿದ್ದ ರೈತ ಪರ ಯೋಜನೆಗಳನ್ನು ನಿಲ್ಲಿಸುವ ಮುಖಾಂತರ ರಾಜಕೀಯ ಹಗೆತನವನ್ನು ರೈತರ ಮೇಲೆ ಸಾಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮಂಡ್ಯದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಮಂಡ್ಯ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.

ಸರ್ಕಾರದ ಮಾಹಿತಿಯ ಪ್ರಕಾರ 14.58 ಲಕ್ಷ ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿಯಾಗಿದ್ದು, 10,748 ಕೋಟಿ ರೂ. ನಷ್ಟವಾಗಿರುವ ಅಂದಾಜು ಇದೆ. 9 ಜಿಲ್ಲೆಗಳಲ್ಲಿ ಬೆಳೆಹಾನಿ ಪ್ರಮಾಣ ಹೆಚ್ಚಾಗಿದೆ. ಎಸ್ ಡಿ ಆರ್ ಎಫ್ ಮಾನದಂಡಗಳ ಅನ್ವಯ 14.24 ಲಕ್ಷ ರೈತರಿಗೆ ಇನ್ ಪುಟ್ ಸಬ್ಸಿಡಿ ರೂಪದಲ್ಲಿ ಈಗಾಗಲೇ 1218 ಕೋಟಿ ರೂ ವಿತರಿಸಲಾಗಿದೆ. ಈಗ ರಾಜ್ಯ ನಿಧಿಯಿಂದ 1033.60 ಕೋಟಿ ರೂ. ಗಳನ್ನು ಟಾಪ್ ಅಪ್ ರೂಪದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಒಟ್ಟಾರೆ ಪರಿಹಾರ ಪಾವತಿಯ ಪ್ರಕ್ರಿಯೆಯಲ್ಲಿನ ಪಾವತಿಗಳನ್ನು ಒಳಗೊಂಡಂತೆ 2251.63 ಕೋಟಿ ರೂ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೊಯ್ಲಿನ ಹಂತಕ್ಕೆ ಬಂದ ಸಂದರ್ಭದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಹೆಚ್ಚು ಬೆಳೆ ನಷ್ಟ ಸಂಭವಿಸಿದೆ. ಹಾಗೆಯೇ ಕೃಷ್ಣ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲ್ಬುರ್ಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ತೊಗರಿಬೇಳೆ, ಹೆಸರು ಕಾಳು, ಹತ್ತಿ, ಮೆಕ್ಕೆಜೋಳ ಬೆಳೆಗಳಿಗೆ ಅತಿಹೆಚ್ಚು ಹಾನಿಯಾಗಿದೆ. ಇದೇ ರೀತಿ ಪಶ್ಚಿಮಘಟ್ಟಗಳು ಮತ್ತು ಕರಾವಳಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಪ್ರಾಣಿ ಮಾನವ ಸಂಘರ್ಷ, ಕಾಫಿ ಮತ್ತು ಅಡಿಕೆಗೆ ಕೊಳೆ, ಎಲೆ ಚುಕ್ಕೆ ರೋಗ. ಮಧ್ಯಕರ್ನಾಟಕದಲ್ಲಿ ಈರುಳ್ಳಿ ಮತ್ತು ನೆಲಗಡಲೆ ಬೆಳೆಗೆ ಹಾನಿ, ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಶೇ.50ರಷ್ಟು ಉತ್ಪಾದನೆಯ ಕೊರತೆ ಎದುರಾಗಿದೆ. ಹಾಗಾಗಿ ಇವುಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮೈಸೂರು ವಿಭಾಗದಲ್ಲಿ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ರೈತರೊಂದಿಗೆ ಸಂಪರ್ಕ ಇರುವ ರಾಜ್ಯದ ಯಾವ ಇಲಾಖೆಗಳು ಸ್ಪಂದಿಸದೆ ಇರುವುದು ರೈತರಿಗೆ ಸಮಸ್ಯೆಯನ್ನು ಉಂಟುಮಾಡಿದೆ. ಎಲ್ಲ ವಿಷಯಗಳನ್ನು ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಶಾಸಕ ಸುರೇಶ್ ಗೌಡ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಬೇಕರಿ ಅರವಿಂದ್, ಸಿ.ಟಿ.ಮಂಜುನಾಥ್ ಮತ್ತಿತರರಿದ್ದರು.




