ಶೋಷಣೆ ಮುಕ್ತ ಭಾರತ ನಿರ್ಮಾಣಕ್ಕಾಗಿ ಸರ್ವ ಜನಾಂಗಕ್ಕೂ ಸಮಾನ ಮೀಸಲಾತಿ ನೀತಿ ಜಾರಿ ಆಗಲೇಬೇಕು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಾಗಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾದ ವೆಂಕಟಗಿರಿಯಯ್ಯರವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಅಂಬೇಡ್ಕರ್ ಭವನದಲ್ಲಿ ಎ ಐ ಬಿ ಎಸ್ ಪಿ ಜಿಲ್ಲಾ ಘಟಕ ಮಂಡ್ಯ ಇವರು ಆಯೋಜಿಸಿದ್ದ ಸರ್ವ ಜನಾಂಗಕ್ಕೂ “ಜಾತಿ ಜನಸಂಖ್ಯೆ ವಾರು ಮೀಸಲಾತಿ ನೀತಿ” ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂಬ ಘೋಷಣೆಯೊಂದಿಗೆ ಬಹುಜನ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾನತೆ ತರುವ ಉದ್ದೇಶದಿಂದ ಭಾರತದ ಸಂವಿಧಾನದಲ್ಲಿ ಮೀಸಲಾತಿ ನೀತಿಯನ್ನು ಅಳವಡಿಸಲಾಗಿದೆ. ಈ ಸದಾಶಯವನ್ನು ಮನುವಾದಿ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸರ್ಕಾರಗಳು ಸಂವಿಧಾನ ವಿರೋಧಿಯಾಗಿ ನಡೆದುಕೊಂಡು ಮೀಸಲಾತಿ ಒಂದು ಬಡತನ ನಿರ್ಮೂಲನ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿವೆ. ವಾಸ್ತವವಾಗಿ ಸಂವಿಧಾನದಲ್ಲಿ ಸರ್ವಜಾತಿಗಳ ಪ್ರಾತಿನಿಧ್ಯದ ಪ್ರಶ್ನೆಯಾಗಿ ಮೀಸಲಾತಿಯನ್ನು ಪರಿಗಣಿಸಬೇಕೆಂಬ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಈ ಮನುವಾದಿ ಪಕ್ಷಗಳಿಗೆ ಇಲ್ಲದಿರುವುದೇ ಕಾರಣವಾಗಿದೆ ಎಂದು ಆರೋಪಿಸಿದರು.
ಅಧ್ಯಕ್ಷತೆ ವಹಿಸಿದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ ಎಂ. ಅನಿಲ್ ಕುಮಾರ್ ಕೆರಗೋಡು ಮಾತನಾಡಿ ರಾಜಕೀಯ ಅಧಿಕಾರ ದೇಶದ ಪ್ರಗತಿಯ ಪೂರಕವಾಗಿರಬೇಕೆ ವಿನಹ ಜನಸಾಮಾನ್ಯರ ಪೀಡಿಸುವ ಆಡಳಿತ ವ್ಯವಸ್ಥೆಯಾಗಬಾರದು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಜನರನ್ನ ಬಿಡಿಸುವ ಪಕ್ಷಗಳಾಗಿವೆ ಎಂದು ಟೀಕಿಸಿದರು. ಸರ್ವಜನಾಂಗದ ಅಭ್ಯುದಯಕ್ಕೆ ಪೂರಕವಾಗಿ ದುಡಿಯಲು ದೀಕ್ಷಾಬದ್ಧವಾಗಿರುವ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯನ್ನು ಸರ್ವ ಜನರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಎಸ್ಸಿ ಎಸ್ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬಿ ಆನಂದ್, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷ ಸುಶ್ಮಿತಾ ಆನಂದ್, ಸುಧಾ ಮಳವಳ್ಳಿ, ವೆಂಕಟೇಶ್ ಹಾಗೂ ಸಿದ್ದಯ್ಯ ದೊಡ್ಬವಳ್ಳಿ ಉಪಸ್ಥಿತರಿದ್ದರು.




