ಮಾಧ್ಯಮ ಸಮಾಜದ ಶಕ್ತಿಯ ಅಂಗ. ಪೊಲೀಸ್ ಹಾಗೂ ಮಾಧ್ಯಮಗಳ ವೃತ್ತಿಯಲ್ಲಿ ಭಿನ್ನತೆಯಿಲ್ಲ. ಹಗಲು, ರಾತ್ರ, ಮಳೆ-ಬಿಸಿಲೆನ್ನದೇ ದಿನದ ೨೪ಗಂಟೆಯೂ ಕೆಲಸ ಮಾಡಬೇಕು. ದೈಹಿಕ ಚಟುವಟಿಕೆಯಿಲ್ಲದೇ ಜಡಹೊಂದಿದ ದೇಹಕ್ಕೆ ಕ್ರೀಡೆಗಳು ಚೇತೋಹಾರಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು.
ಮಂಡ್ಯನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಹಿನ್ನಲೆ ಸಮವಸ್ತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಪತ್ರಕರ್ತರೂ ಹಿಂದೆ ಉಳಿದಿಲ್ಲ. ಕೆಲ ತಿಂಗಳ ಹಿಂದಷ್ಟೇ ಪೊಲೀಸರೊಂದಿಗೆ ಸೌಹಾರ್ದ ಕ್ರೀಡೆಯಲ್ಲಿ ತೊಡಗಿದ್ದ ಪತ್ರಕರ್ತರು ಸವಾಲಿಗೆ ಪ್ರತಿ ಸವಾಲೆಸೆದರು. ಕ್ರೀಡೆಯಲ್ಲಿ ಸೋಲು, ಗೆಲುವು ಸಮನಾಗಿ ಸ್ವೀಕರಿಸಿ. ಎಲ್ಲರೂ ಪ್ರಶಂಶಿಸುವ ರೀತಿ ಈ ಕ್ರೀಡೆ ಆಯೋಜನೆಗೊಂಡಿದೆ. ಅದರಂತೆ ಯಶಸ್ವಿಯಾಗಿ ನಡೆಯಲಿದೆ ಎಂದು ಆಶಿಸಿದರು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಡಿ.ಶಶಿಧರ್ ಕಾಡುಕೊತ್ತನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಮಂಜುನಾಥ, ಖಜಾಂಚಿ ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಕೆ.ಎನ್.ನವೀನ್ಕುಮಾರ್ ಇತರರಿದ್ದರು.




