Friday, November 20, 2026

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ ಅವರಿಂದ ‘ಹಿಟ್ ಅಂಡ್ ರನ್’ ಹೇಳಿಕೆ ಬೇಡ : ಶಾಸಕ ರವಿಕುಮಾರ್

ಮಂಡ್ಯ ತಾಲ್ಲೂಕು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗಾರಿಕೆ ಆರಂಭಿಸಲು ಉತ್ಸುಕನಾಗಿದ್ದು ರಾಜ್ಯ ಸರ್ಕಾರ ಅಗತ್ಯ ಭೂಮಿ ನೀಡಲು ಮುಂದಾಗುತ್ತಿಲ್ಲ ಎಂಬುದು ಕುಮಾರಸ್ವಾಮಿ ಅವರ ಆರೋಪ ಹಿಟ್ ಅಂಡ್ ರನ್ ಹೇಳಿಕೆ ಆಗುತ್ತದೆ. ನನ್ನ ಮತಕ್ಷೇತ್ರ ಬಸರಾಳು ಅಥವಾ ಉಮ್ಮಡಹಳ್ಳಿ ಬಳಿ ಸರ್ಕಾರಿ ಜಮೀನು ಲಭ್ಯವಿದ್ದು, ಅಗತ್ಯ ಭೂಮಿ ಒದಗಿಸಲು ಬದ್ದನಾಗಿದ್ದು, ಈ ಸಂಬಂಧ ಕೇಂದ್ರ ಸಚಿವರ ಅಧೀನ ಅಧಿಕಾರಿಗಳು ಮಾಹಿತಿ ನೀಡಿದರೆ ಸಾಕು, ಅದನ್ನು ಬಿಟ್ಟು ಹಿಟ್ ಅಂಡ್ ರನ್ ಹೇಳಿಕೆ ಸರಿಯಲ್ಲ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಗೌಡ ತಿರುಗೇಟು ನೀಡಿದರು.

ಮಂಡ್ಯನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕೈಗಾರಿಕೆ ಸ್ಥಾಪನೆಗೆ ಒಲವು ತೋರುವ ಉದ್ಯಮಿಗಳು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದರೆ ಭೂ ಸ್ವಾಧೀನ ಮಾಡಿ ಭೂಮಿ ಒದಗಿಸಲಾಗುವುದು, ಅದನ್ನು ಬಿಟ್ಟು ರಾಜ್ಯ ಮತ್ತು ದೇಶವನ್ನು ಆಳಿರುವ ಕುಮಾರಸ್ವಾಮಿ ಅವರು ಜಿಲ್ಲೆಯ ಜನರನ್ನು ಮಂಗ ಮಾಡುವುದು ಹಾಗೂ ಭಾವನಾತ್ಮಕವಾಗಿ ಪ್ರಚೋದಿಸುವುದನ್ನು ಬಿಡಬೇಕೆಂದರು.

ಜಿಲ್ಲೆಗೆ ಬೃಹತ್ ಕೈಗಾರಿಕೆ ತರಲಿ

ನಾನು ಒಂದು ಸಣ್ಣ ತಾಲ್ಲೂಕಿನ ಶಾಸಕ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಮಂಡ್ಯ ಜಿಲ್ಲೆಯ ಸಂಸದರಾಗಿ, ದೇಶದ ಬೃಹತ್ ಕೈಗಾರಿಕಾ ಸಚಿವರಾಗಿದ್ಧಾರೆ. ಚಿಟಿಕೆ ಹೊಡೆಯುವ ವೇಳೆಯಲ್ಲಿ ಯಾವುದಾದರೂ ಬೃಹತ್ ಕೈಗಾರಿಕೆಯನ್ನು ಜಿಲ್ಲೆಗೆ ತರುವ ಸಾಮರ್ಥ್ಯವಿದೆ, ಅದನ್ನು ನಿರ್ವಹಿಸಲಿ ಎಂದು ಸವಾಲು ಹಾಕಿದರು.

ಜಿಲ್ಲಾ ಕೇಂದ್ರದಲ್ಲಿ ಟ್ರಾಮಾ ಕೇರ್ ಸೆಂಟರ್ ತೆರೆಯಲು ಅಗತ್ಯ ಜಮೀನು ನೀಡುವಂತೆ ಕೇಂದ್ರ ಸರ್ಕಾರದ ಕಾರ್ಯದರ್ಶಿ ಅವರಿಂದ ಜಿಲ್ಲಾಧಿಕಾರಿಗೆ ಪತ್ರ ಬಂದಿದೆ. ಹಿಂದಿನ ಸಂಸದರಾದ ಸುಮಲತಾ ಅಂಬರೀಶ್ ಅವರು ಟ್ರಾಮಾ ಕೇರ್ ಸೆಂಟರ್ ತರಲು ಪ್ರಯತ್ನಿಸಿದರು. ಆದರೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಕುಮಾರಸ್ವಾಮಿ ಅವರು ಪ್ರಭಾವಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಟ್ರಾಮಾ ಕೇರ್ ಸೆಂಟರ್ ಮಂಜೂರು ಮಾಡಿಸಲಿ ಎಂದರು.

ಜಿಲ್ಲಾಸ್ಪತ್ರೆ ಸಮೀಪದ ತಮಿಳು ಕಾಲೋನಿ ಜಾಗದ ವಿವಾದ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಅಗತ್ಯವಾಗಿರುವ 2 ಎಕರೆ ಜಾಗವನ್ನು ಡಿಹೆಚ್ಓ ಕಚೇರಿ ಪ್ರಾಂಗಣದಲ್ಲಿ ನೀಡಲು ಉತ್ಸುಕನಾಗಿದ್ದು, ಈ ಬಗ್ಗೆ ಕುಮಾರಸ್ವಾಮಿ ಅವರು ಕಾಳಜಿ ತೋರಬೇಕು, ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಮಾತು ತಪ್ಪಿಲ್ಲವೇ ?

ಮೈಷುಗರ್ ಶಾಲೆಯ ನಿರ್ವಹಣೆ ದುಸ್ಥರವಾಗಿದ್ದು ಮಕ್ಕಳು ಹಾಗೂ ಬೋದಕರ ಹಿತದೃಷ್ಠಿಯಿಂದ ಶಾಲೆಯನ್ನು ಖಾಸಗಿಯವರ ನಿರ್ವಹಣೆಗೆ ನೀಡುವ ಕುರಿತು ನಾವು ಕೈಗೊಂಡ ನಿರ್ಣಯವನ್ನು ವಿರೋಧಿಸಿದ ಕೇಂದ್ರ ಸಚಿವರು 25 ಕೋಟಿ ನೆರವು ನೀಡಿ ಶಾಲೆಯ ಉನ್ನತಿಗೆ ಶ್ರಮಿಸುವ ಭರವಸೆ ನೀಡಿದ್ದರು. ಈಗ ಕೇವಲ 19 ಲಕ್ಷ ರೂ. ನೀಡಿದ್ದಾರೆ. ಹಾಗೂ ಆದಿಚುಂಚನಗಿರಿ ಮಠದ ಒಡೆತನಕ್ಕೆ ಶಾಲೆ ಹಸ್ತಾಂತರಿಸುವ ಮಾತನಾಡುತ್ತಿದ್ದಾರೆ. ನಾವು ಈ ಬಗ್ಗೆ ಅಪಸ್ವರ ತಗೆದರೆ ಮಠದ ವಿರೋಧಿಗಳೆಂದು ಬಿಂಬಿಸುತ್ತಾರೆ. ಕೇಂದ್ರ ಸಚಿವರು ಮಾತು ತಪ್ಪಿಲ್ಲದೇ ಎಂದು ಮೂದಲಿಸಿದರು.

ಕುಮಾರಸ್ವಾಮಿ ಅವರ ಬಳಿ ಪ್ರಬಲವಾದ ಅಧಿಕಾರವಿದ್ದು ಅವರು ಮಂಜೂರು ಮಾಡುವ ಯಾವುದೇ ಅಭಿವೃದ್ದಿ ನಮ್ಮ ಸರ್ಕಾರದ ಸಹಕಾರವಿದೆ, ಅವರ ಕಾಲದಲ್ಲಿ ಹಲವು ಕಾರ್ಖಾನೆಗಳನ್ನು ತರಲು ಪ್ರಯತ್ನಿಸಲಿ ಎಂದು ಸವಾಲು ಹಾಕಿದರು.

ಒಂದು ತಿಂಗಳು ಮೌನ

ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಕುರಿತು ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಒಂದು ತಿಂಗಳ ಕಾಲ ಯಾವುದೇ ರಾಜಕೀಯ ಚರ್ಚೆಗೆ ಮುಂದಾಗದೇ ಮೌನ ವಹಿಸುತ್ತೇನೆ.

ಅಧಿಕಾರದಲ್ಲಿರುವವರು ಶಾಂತವಾಗಿರಬೇಕು. ಅದರಲ್ಲೂ ಮುಖ್ಯಮಂತ್ರಿಯ ಸುಪುತ್ರನಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ. ನಾಟಿ ಕೋಳಿ ಊಟಕ್ಕೆ ಶಾಸಕ ಮಿತ್ರರೂ ಸೇರಿದಂತೆ ತಪ್ಪೇನು ಎಂದು ಪ್ರಶ್ನಿಸಿದ ಅವರು, ಹತ್ತಿಪ್ಪತ್ತು ಮಂದಿ ಶಾಸಕರು ಒಂದೆಡೆ ಸೇರಿ ಸಭೆ ನಡೆಸಿದರೆ ನಾಯಕತ್ವ ಬದಲಾಯಿಸಲು ಸಾಧ್ಯವಿಲ್ಲ, ಸೂಕ್ತ ಸಮಯದಲ್ಲಿ ಹೈ ಕಮಾಂಡ್ ಬಯಸಿದವರಿಗೆ ನಾಯಕತ್ವ ಒಲಿದು ಬರಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮತ್ತಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ