ಮಹಾತ್ಮ ಗಾಂಧಿ ಹೆಸರಲ್ಲಿದ್ದ ಮನರೇಗಾ ಕಾಯ್ದೆಯ ಹೆಸರನ್ನು ರಾಮ್‌ಜೀ ಕಾಯ್ದೆ ಎಂದು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಹಾತ್ಮ ಗಾಂಧಿ ಫೋಟೋ ಹಿಡಿದು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ,ಬಿಜೆಪಿಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮನರೇಗಾಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಕೇಂದ್ರ ಸರ್ಕಾರದ ನಿರ್ಧಾರವು ಅವರ ಮೇಲಿನ ಸರ್ಕಾರದ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದುಗೊಳಿಸುವುದು ಸರಿಯಲ್ಲ. ಮಹಾತ್ಮ ಗಾಂಧಿಯವರು ಈ ದೇಶದ ಮಹಾನ್ ನಾಯಕರು.ಅಂತವರ ಭಾವಚಿತ್ರ ತೆಗೆಯುವ ಕೆಲಸ ಸರಿಯಲ್ಲ. ನಿರಂತರವಾಗಿ ಕಾಂಗ್ರೆಸ್ ವಿರುದ್ದ ಬಿಜೆಪಿ ಮತ್ತು ಆರ್ ಎಸ್ಎಸ್ ನೇತೃತ್ವದ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸುತ್ತಿದೆ.ತಕ್ಷಣವೇ ಈ ನಿರ್ಧಾರ ಕೈಬಿಟ್ಟು ಮಸೂದೆ ವಾಪಸ್ಸು ಪಡೆಯಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ಕಾಂಗ್ರೆಸ್ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮುಖಂಡರಾದ ಚಿನಕುರಳಿ ರಮೇಶ್, ಕಮಲರಾಜ್, ಪದ್ಮ ಮೋಹನ್,ಪ್ರಕಾಶ್,ಕಿರಣ್ ಕುಮಾರ್ , ಕ್ರಾಂತಿಸಿಂಹ, ಸಿ.ಎಂ.ದ್ಯಾವಪ್ಪ ,ಗುರು ಆತ್ಮಾನಂದ, ಹೆಚ್.ವಿ.ನಾಗರಾಜು, ಅಭಿಲಾಶ್, ಕೃಷ್ಣೆಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.




