Monday, November 23, 2026

ಪ್ರಾಯೋಗಿಕ ಆವೃತ್ತಿ

ಚಲುವರಾಯಸ್ವಾಮಿ ವಿರುದ್ಧ ಸುರೇಶ್‌ಗೌಡ ಆರೋಪ ಆಧಾರ ರಹಿತ : ಗಂಗಾಧರ್

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಬಂಧ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಮಾಜಿ ಶಾಸಕ ಸುರೇಶ್‌ಗೌಡ ಆರೋಪ ಆಧಾರ ರಹಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಖಂಡನೆ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕ್ಷೇತ್ರದ ಶಾಸಕರಾಗಿದ್ದಾಗ ಅನುಮೋದನೆ ಪಡೆದ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕರು ಹೇಳುತ್ತಿದ್ದಾರೆ. ಈ ಸಂಬಂಧ ಅವರು ತಮ್ಮ ಅವಧಿಯಲ್ಲಿ ಕಾಮಗಾರಿಯ ಕಾರ್‍ಯಾನುಮೋದನೆ ಪಡೆದ ದಾಖಲೆಗಳನ್ನು ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜಾಗ ನೀಡುತ್ತಿಲ್ಲ ಎನ್ನುತ್ತಿರುವುದು ಹಾಸ್ಯಾಸ್ಪದ. ಇದಕ್ಕೆ ಮಂಡ್ಯ ಕ್ಷೇತ್ರದ ಶಾಸಕರು ಉತ್ತರ ನೀಡಿದ್ದಾರೆ. ಅವರು ಜಿಲ್ಲೆಗೆ ಕೈಗಾರಿಕೆಗಳನ್ನು ತರುವ ಉತ್ಸಾಹದಲ್ಲಿದ್ದರೆ ಮುಖ್ಯಮಂತ್ರಿ ಅಥವಾ ಕೈಗಾರಿಕಾ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಲಿ. ಅದನ್ನು ಬಿಟ್ಟು ಒಂದೂವರೆ ವರ್ಷದಿಂದ ಕೇವಲ ಹೇಳಿಕೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.

ಸ್ವಾರ್ಥಕ್ಕೆ ಶನಿವಾರ ಕ್ಷೇತ್ರಕ್ಕೆ ಬರುತ್ತಾರೆ ಎಂದು ನಮ್ಮ ನಾಯಕರ ವಿರುದ್ಧ ಮಾತನಾಡುವ ಸುರೇಶ್‌ಗೌಡ ಅವರು, `ತಾನು ಕಳ್ಳ ಪರರ ನಂಬ’ ನಾಣ್ನುಡಿಯಂತೆ ಸ್ವತಃ ಕ್ಷೇತ್ರದಲ್ಲಿ ಇರದ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೇ ಕಾಣದೇ ನಾಪತ್ತೆಯಾಗಿದ್ದರು. ಇವರು ತಮ್ಮ ತಪ್ಪಾದ ಹೇಳಿಕೆಗೆ ಹೈಕೋರ್ಟ್‌ನಲ್ಲಿ ಕ್ಷಮೆ ಕೇಳಿದ್ದಾರೆ. ಇವರಿಗೆ ಸಚಿವರ ಬಗ್ಗೆ ಮಾತನಾಡುವ ನೈತಿಕತೆಯಿದೆಯೇ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್‍ಯದರ್ಶಿ ಸುಂಡಹಳ್ಳಿ ಮಂಜುನಾಥ್, ಎಸ್ಸಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ವಿಜಯ್‌ಕುಮಾರ್, ನಗರಸಭೆ ಸದಸ್ಯ ಶ್ರೀಧರ್, ಜಿಲ್ಲಾ ಕಾರ್‍ಯದರ್ಶಿ ನಾಗರಾಜು, ಗುರುರಾಜ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ