ಮಂಡ್ಯ ಜಿಲ್ಲೆಯ ರಾಜಕಾರಣ ಚರಿತ್ರೆಯಲ್ಲಿ ದಲಿತ ಸಮುದಾಯಕ್ಕೆ ವಿಫುಲ ಅವಕಾಶ ನೀಡಿದಂತ ಉದಾಹರಣೆ ಇಲ್ಲ. ಇದರ ಬಗ್ಗೆ ಹಲವು ಬಾರಿ ಚಳುವಳಿಗಾರರು ಅಸಮಾಧಾನ ವ್ಯಕ್ತಪಡಿಸಿದ್ದೇವೆ. ಎಲ್ಲ ಅಧಿಕಾರವೂ ಒಂದೇ ಜಾತಿಗೆ ಸೀಮಿತ ಮಾಡಲಾಗಿದೆ ಎಂದು ವ್ಯಕ್ತಪಡಿಸಿದ್ದೇವು. ಕಾಂಗ್ರೆಸ್ ಸರ್ಕಾರದಲ್ಲಿ ಇದೇ ಪ್ರಥಮ ಬಾರಿಗೆ ದಲಿತರಿಗೆ ಅಧಿಕಾರ ನೀಡಿರುವುದು ಸಂತಸ ತಂದಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ತಿಳಿಸಿದರು.
ರಾಜ್ಯಮಟ್ಟದ ಮೂರು ಹುದ್ದೆಗಳನ್ನು ದಲಿತರಿಗೆ ನೀಡಿದ್ದಾರೆ. 50 ವರ್ಷಗಳ ಇತಿಹಾಸವಿರುವ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ಚುಕ್ಕಾಣಿ ನೀಡಲಾಗಿದೆ. ಬಿ.ಪಿ.ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ಅದರಂತೆ ಜಿಲ್ಲೆಯ ನಾಲ್ವರಿಗೆ ಅಧಿಕಾರ ನೀಡಲಾಗಿದೆ ಎಂದು ಮಂಡದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಹಿನ್ನೆಲೆಯಲ್ಲಿ ದಲಿತ ಸಮುದಾಯ ಸಂಘಟನೆಗಳ ಅಭಿನಂದನಾ ಸಮಿತಿ, ಪ್ರಗತಿಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ವತಿಯಿಂದ ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ನಿಗಮ ಮಂಡಳಿಗಳಲ್ಲಿ ಅಧಿಕಾರ ಪಡೆದ ದಲಿತ ಮುಖಂಡರಿಗೆ ಅಭಿನಂದನಾ ಸಮಾರಂಭ ಡಿ.28 ರಂದು ಬೆಳಿಗ್ಗೆ 11 ಕ್ಕೆ ನಗರದ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಸಿಂಹಪಾಲು ದಲಿತ ಸಮುದಾಯಕ್ಕೆ ಸಿಕ್ಕಿದೆ. ಅಸಮಾಧಾನದ ಮಾತುಗಳು ಬಂದಿವೆ. ಮನ್‌ಮುಲ್, ಡಿಸಿಸಿ ಬ್ಯಾಂಕ್, ಮೈಷುಗರ್ ಕಾರ್ಖಾನೆಗೂ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಅವರಿಗೆ ಅಧಿಕಾರ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಾರಿ ದಲಿತರಿಗೆ ಸಿಂಹಪಾಲು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಅವರು ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಇಂದಿಗೆ 50 ವರ್ಷ ಕಳೆದರೂ ಮಂಡ್ಯ ಕ್ಷೇತ್ರದ ಯಾವುದೇ ಪಕ್ಷದ ಶಾಸಕರು ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಗುರುತಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಿಲ್ಲ. ಶಾಸಕ ಪಿ.ರವಿಕುಮಾರ್ ಗಣಿಗ ಅವರು ದಲಿತ ಸಮುದಾಯದ ಪತ್ರಕರ್ತ ಬಿ.ಪಿ.ಪ್ರಕಾಶ್ ಅವರನ್ನು ಗುರುತಿಸಿ ಮುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಮೊದಲಿಗರಾಗಿದ್ದಾರೆ. ಅದರಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಅನುಸೂಚಿತ ಜಾತಿ, ಅನಸೂಚಿತ ಪಂಗಡದ ಆಯೋಗದ ಅಧ್ಯಕ್ಷರಾಗಿ ಆದರ್ಶ ಶಾಲೆಯ ಸಂಸ್ಥಾಪಕ ಡಾ.ಮೂರ್ತಿ, ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ರಾಜ್ಯ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ರಘುನಂದನ್ ಅವರನ್ನು ನೇಮಕ ಮಾಡುವ ಮೂಲಕ ನಿಗಮ ಮಂಡಳಿಗಳಿಗೆ ದಲಿತ ಸಮುದಾಯದ ಮುಖಂಡರನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನೆನೆಯುವ ಉದ್ದೇಶವಾಗಿದೆ ಎಂದು ಹೇಳಿದರು.
ಹಾಗೆಯೇ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಲೇಬೇಕೆಂದು ದಲಿತ ನಾಯಕರ ಬೆನ್ನಿಗೆ ನಿಂತ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಗಣಿಗ ಅವರ ದೃಢ ನಿಲುವುಗಳನ್ನು ದಲಿತ ಸಮುದಾಯ ಎಂದೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದ ದಲಿತ ಮುಖಂಡರಿಗೆ ಅಧಿಕಾರ ನೀಡಿದ ಸಚಿವ ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಗಣಿಗ ಹಾಗೂ ಅಧಿಕಾರ ಪಡೆದ ದಲಿತ ಮುಖಂಡರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.
ಅಂದು ನಡೆಯುವ ಅಭಿನಂದನಾ ಸಮಾರಂಭವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮುಖ್ಯ ಭಾಷಣ ಮಾಡುವರು. ಅಭಿನಂದಿತರಾಗಿ ಅನುಸೂಚಿತ ಜಾತಿ, ಅನಸೂಚಿತ ಪಂಗಡದ ಆಯೋಗದ ಅಧ್ಯಕ್ಷರಾಗಿ ಆದರ್ಶ ಶಾಲೆಯ ಸಂಸ್ಥಾಪಕ ಡಾ.ಮೂರ್ತಿ, ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ರಾಜ್ಯ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ರಘುನಂದನ್ ಹಾಗೂ ಮೂಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಆಶಯ ನುಡಿಯುವರು. ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಸ್ವಾಗತ ಭಾಷಣ ಮಾಡುವರು. ವಿವಿಧ ಗಣ್ಯರು ಭಾಗವಹಿಸುವರು. ಆದ್ದರಿಂದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಅಂದಾನಿ ಸೋಮನಹಳ್ಳಿ, ನರಸಿಂಹಮೂರ್ತಿ, ಹೆಚ್.ಜಿ.ಗಂಗರಾಜು, ಸುಂಡಹಳ್ಳಿ ಮಂಜುನಾಥ್, ಎಂ.ವಿ.ಕೃಷ್ಣ ವಿಜಯಕುಮಾರ್ ಚಂದಗಾಲು ಇದ್ದರು.




