ಉತ್ತರಪ್ರದೇಶದ ಕಾಶಿಯಲ್ಲಿರುವ ಗ್ಯಾನವ್ಯಾಪಿ ಮಸೀದಿಯಲ್ಲಿ ಕೋರ್ಟ್ ಆದೇಶದಂತೆ ಸರ್ವೆ ಕಾರ್ಯ ನಡೆದಿದ್ದು,ಮಸೀದಿಯಲ್ಲಿರುವ ನೀರಿನ ಕಾರಂಜಿಯನ್ನು ಶಿವಲಿಂಗ ಎಂದು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡಲಾಗುತ್ತಿರುವುದನ್ನು ಖಂಡಿಸಿ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಎಸ್ ಡಿಪಿಐ ಕಾರ್ಯಕರ್ತರು ಕೆಲವು ಮಾಧ್ಯಮಗಳು ಸರ್ವೆ ಸಂದರ್ಭದಲ್ಲಿ ಶಿವಲಿಂಗ ಸಿಕ್ಕಿದೆ ಎಂದು ಹೇಳುತ್ತಿವೆ.
ಈ ಬಗ್ಗೆ ಇನ್ನೂ ಸಮಗ್ರ ತನಿಖೆ ಆಗದಿದ್ದರೂ ಮಾಧ್ಯಮಗಳು ಅಪಪ್ರಚಾರದಲ್ಲಿ ತೊಡಗಿವೆ. ಇದನ್ನು ಎಸ್ ಡಿಪಿಐ ಖಂಡಿಸುತ್ತದೆ ಎಂದರು.
ಅಲ್ಲದೆ ಗ್ಯಾನವ್ಯಾಪಿ ಮಸೀದಿಯ ಒಂದು ಭಾಗವನ್ನು ಸೀಲ್ ಮಾಡಿ ಮಸೀದಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಕೂಡಲೇ ನಿರ್ಬಂಧವನ್ನು ತೆರವುಗೊಳಿಸಿ ಮಸೀದಿ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ ಎಸ್ ಡಿಪಿಐ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರದ ನಿಲುವನ್ನು ಖಂಡಿಸುತ್ತೇವೆ ಎಂದರು.
ಎಸ್ ಡಿಪಿಐ ಜಿಲ್ಲಾಧ್ಯಕ್ಷ ಸಾದತ್ ಪಾಷಾ, ಉಪಾಧ್ಯಕ್ಷ ಅಬ್ದುಲ್ ರಹೀಮ್, ಪ್ರಧಾನ ಕಾರ್ಯದರ್ಶಿ ಮೊಕ್ತಾರ್ ಅಹಮದ್,ಜಿಲ್ಲಾ ಸಮಿತಿ ಸದಸ್ಯ ಮಹಮದ್ ತಾಹೇರ್, ಫಾರೂಕ್ ಅಹಮದ್ ಸೇರಿದಂತೆ ಹಲವು ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.