ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆಟೋವೊಂದರಲ್ಲಿ ಗಾಂಜಾ ಸೊಪ್ಪನ್ನ ಮಾರಾಟ ಮಾಡಿ ಸಿಕ್ಕಿ ಬಿದ್ದ ಅಸಾಮಿಗೆ ಮಂಡ್ಯದ 2ನೇ ಅಪರ ಹಿರಿಯ ಪಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 6 ತಿಂಗಳ ಸಾದಾ ಕಾರಾಗ್ರಹ ಸಜೆ ಹಾಗೂ 5 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಮಹಮ್ಮದ್ ಅಕೀಲ್ ಗಾಂಜಾ ಮಾರಾಟ ಮಾಡಿ ಜೈಲು ಶಿಕ್ಷೆ ಗುರಿಯಾದವನು.
ಏನಿದು ಘಟನೆ ?
ನ.15, 2021 ರ ಸಂಜೆ 4 ಗಂಟೆಯ ಸಮಯದಲ್ಲಿ ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಶ್ರೀ ಶನಿಮಹಾತ್ಮ ದೇವಸ್ಥಾನದ ಬಳಿ ಆರೋಪಿ ಮಹಮ್ಮದ್ ಅಕೀಲ್ (ಕೆಎ-11 ಎ-2353) ಅಟೋ ರಿಕ್ಷಾದಲ್ಲಿ ಕುಳಿತುಕೊಂಡು ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಹಳದಿ ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ 33 ಚಿಕ್ಕ ಪ್ಲಾಸ್ಟಿಕ್ ಕವರ್ ಗಳಲ್ಲಿ ಸುಮಾರು 70 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ಇಟ್ಟುಕೊಂಡು ಬರುವ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ, ಈ ಬಗ್ಗೆ ಸುಳಿವು ಪಡೆದ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿ, ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣವು ಮಂಡ್ಯದ 2ನೇ ಅಪರ ಹಿರಿಯ ಪಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಯೋಗೇಶ್ವರಿ ಅವರ ಮುಂದೆ ವಿಚಾರಣೆಗೆ ಬಂದು, ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 6 ತಿಂಗಳ ಸಾದಾ ಕಾರಾಗ್ರಹ ಸಜೆ ಮತ್ತು ರೂ.5000 ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ಕರುಣಶ್ರೀ.ಎಂ.ಕೆ ವಾದ ಮಂಡನೆ ಮಾಡಿದ್ದರು.




