Wednesday, October 23, 2024

ಪ್ರಾಯೋಗಿಕ ಆವೃತ್ತಿ

ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಪ್ರಮುಖ

ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹಳ ಪ್ರಮುಖವಾದುದು. ಪತ್ರಿಕೆಗಳು ಇಲ್ಲದಿದ್ದರೆ ಜಗತ್ತು ಕುರುಡಾಗುತ್ತಿತ್ತು ಎಂದು ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಸ್ವಾಮಿಗೌಡ ತಿಳಿಸಿದರು.

ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಮಂಡ್ಯ ಜಿಲ್ಲಾ ಪತ್ರಕರ್ತರ, ಮುದ್ರಣಕಾರರ ಮತ್ತು ವಿತರಕರ ಸಹಕಾರ ಸಂಘದಿಂದ ಆಯೋಜಿಸಿದ್ದ 179ನೇ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು.

ಪತ್ರಿಕೆಗಳು ಜಗತ್ತಿನ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುತ್ತಿವೆ.ಪತ್ರಿಕಾ ಮಾಧ್ಯಮ ತಮ್ಮ ಮೌಲ್ಯ ಕಾಪಾಡಿಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪತ್ರಕರ್ತರು ಪತ್ರಿಕಾ ಧರ್ಮ ಮತ್ತು ಕೌಶಲ್ಯ ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸುವುದರ ಜೊತೆಗೆ ತಮ್ಮ ಬದುಕು ಕಟ್ಟಿಕೊಳ್ಳಬೇಕಿದೆ.ಪತ್ರಕರ್ತರು ತಾಳ್ಮೆ ಬೆಳೆಸಿಕೊಂಡರೆ ವೃತ್ತಿಯಲ್ಲಿ ಏನಾದರೂ ಸಾಧಿಸಬಹುದು ಎಂದರು.

ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಪ್ರೊ.ಹೆಚ್.ಎಲ್.ಕೇಶವಮೂರ್ತಿ ಅವರು ಒಂದೊಳ್ಳೆ ಉದ್ದೇಶ ಇಟ್ಟುಕೊಂಡು “ಉದಯಕಾಲ” ದಿನ ಪತ್ರಿಕೆ ಆರಂಭಿಸಿದ್ದರು. ಅವತ್ತಿಗೆ ಅದು ಮಂಡ್ಯದಲ್ಲಿ ಉತ್ತಮ ಸಂಚಲನ ಮೂಡಿಸಿದ ಪತ್ರಿಕೆಯಾಗಿತ್ತು. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳುವುದರ ಜೊತೆಗೆ ವ್ಯವಸ್ಥೆಗೆ ಚಾಟಿ ಬೀಸುವ ಕೆಲಸ ಮಾಡಿದರು.

ಆ ಪತ್ರಿಕೆಯನ್ನು ನನ್ನ ಸನ್ಮಿತ್ರ ಪುಟ್ಟಲಿಂಗಯ್ಯ ಅವರು ಮುನ್ನಡೆಸುತ್ತಿದ್ದು, ಪ್ರೊ.ಹೆಚ್.ಎಲ್.ಕೆ. ಅವರ ಸದುದ್ದೇಶವನ್ನು ಸಾಕಾರಗೊಳಿಸಿರುವುದರಿಂದ ನಿಜಕ್ಕೂ ಸಂತೋಷವಾಗುತ್ತದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದೃಶ್ಯಮಾಧ್ಯಮಗಳ ಅಬ್ಬರದಲ್ಲಿ ಮುದ್ರಣ ಮಾಧ್ಯಮ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಈ ನಡುವೆಯೂ ಮುದ್ರಣ ಮಾಧ್ಯಮ ಅನಿವಾರ್ಯವಾಗಿದ್ದು, ತನ್ನದೇ ಆದ ಛಾಪನ್ನು ಮೂಡಿಸಿಕೊಂಡು ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಪುಟ್ಟಲಿಂಗಯ್ಯ ಹಾಗೂ ದ.ಕೋ.ಹಳ್ಳಿ ಚಂದ್ರಶೇಖರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ಮಂಡ್ಯ ಜಿಲ್ಲಾ ಪತ್ರಕರ್ತರ, ಮುದ್ರಣಕಾರರ ಮತ್ತು ವಿತರಕರ ಸಹಕಾರ ಸಂಘದ ಅಧ್ಯಕ್ಷ ಕೌಡ್ಲೆ ಚನ್ನಪ್ಪ,ಪತ್ರಕರ್ತರಾದ ದಾಸ್ ಪ್ರಕಾಶ್, ಸೋಮಶೇಖರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!