ಮಂಡ್ಯ ಜಿಲ್ಲೆಯ ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ಕಳೆದ ಜ.16 ರಂದು ಆಸ್ತಿ ವಿಚಾರಕ್ಕೆ ಜಗಳ ನಡೆದು, ಸತಃ ಅಣ್ಣನೇ ತಮ್ಮ ಯೋಗೇಶ್ (30) ಎಂಬಾತನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಂದೇ ಕುಟುಂಬದ ನಾಲ್ವರು ಆರೋಪಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಯೋಗೇಶನನ್ನು ಕೊಲೆ ಮಾಡಿದ ಆರೋಪದ ಮೇಲೆ ಆತನ ಅಣ್ಣ ನಿಂಗರಾಜು (50), ಅಣ್ಣನ ಪತ್ನಿ , ಅಣ್ಣನ ಮಕ್ಕಳಾದ ಭರತ್ (21) ಹಾಗೂ ದರ್ಶನ್ (24) ಎಂಬುವರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯೋಗೇಶನ ಮತ್ತೊಬ್ಬ ಅಣ್ಣ ಎಂ.ಎನ್.ಕೆಂಪೇಗೌಡ ಕೆರಗೋಡು ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಆರೋಪಿಗಳಾದ ನಿಂಗರಾಜು ಹಾಗೂ ಭರತ್ ನನ್ನು ಜ.18 ರಂದು ರಾತ್ರಿ 10.30 ಗಂಟೆಯ ಸಂದರ್ಭದಲ್ಲಿ ಮಂಡ್ಯನಗರದ ಬಿ.ಜಿ.ಎಸ್ ಕಲ್ಯಾಣ ಮಂಟಪದ ಬಳಿ ಬಂಧಿಸಲಾಗಿದೆ. ನಿಂಗರಾಜುವಿನ ಪತ್ನಿ ಹಾಗೂ ಆಕೆಯ ಮಗ ದರ್ಶನ್ ನನ್ನು ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಬಂಧಿಸಲಾಗಿದೆ.
ಈ ಪ್ರಕರಣದ ಆರೋಪಿಗಳ ಪತ್ತೆಗೆ ಮಂಡ್ಯ ಉಪ-ನಿರೀಕ್ಷಕರಾದ ಮಂಜುನಾಥ ಎಂ ಅವರ ನೇತೃತ್ವದಲ್ಲಿ ಕೆರಗೋಡು ಪೊಲೀಸ್ ಠಾಣಾ ಪಿ.ಎಸ್.ಐ ಕಾಶೀನಾಥ್ ಬಗಲಿ ಹಾಗೂ ಶಿವಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ ರಾಘವೇಂದ್ರ ಕಠಾರಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್‌ಐ ಕುಮಾರ ಎಸ್ ಎಂ. ಮಂಜುನಾಥ, ಚೇತನ್ ಕುಮಾರ ಎಸ್ ಆರ್. ಹೂವಣ್ಣ ಎಸ್ ಬಿರಾದರ, ವಿನಾಯಕ ದೊಡ್ಡಮನಿ ಮತ್ತು ಮಹಿಳಾ ಸಿಬ್ಬಂದಿಯಾದ ಶೃತಿ ಮತ್ತು ಪೂಜಾ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಪೊಲೀಸರು ಈ ಕಾರ್ಯವನ್ನು ಮಂಡ್ಯ ಎಸ್ಪಿ ಶೋಭಾರಾಣಿ ಅವರು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




