ಮಂಡ್ಯ ಜಿಲ್ಲೆಯ ದೊಡ್ಡಕೆರೆ ಎನ್ನುವ ಹೆಗ್ಗಳಿಕೆ ಹೊಂದಿರುವ ಸೂಳೆಕೆರೆಗೆ ಕಾಯಕಲ್ಪ ಕೊಡಲು ಮುಂದಾಗಿದ್ದು, 34 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಗಿದೆ.
ಇತ್ತೀಚಿನ ವರ್ಷದಲ್ಲಿ ಜಲಮೂಲಗಳನ್ನು ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲು. ಅದರಲ್ಲೂ ಕೆರೆ ಒತ್ತುವರಿ ತೆರವು ಮಾಡುವುದಂತೂ ಸವಾಲಿನ ಕೆಲಸ. ಆದಾಗ್ಯೂ ಹಲವು ಗ್ರಾಮದ ಸಾವಿರಾರೂ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಶಾಸಕ ಕೆ.ಎಂ.ಉದಯ್ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತಿದೆ
ಕೆಲವರು ಬರೀ ಮಾತನಾಡುತ್ತಾರೆಯೇ ಹೊರತು ಅಭಿವೃದ್ಧಿ ಕೆಲಸ ಮಾಡಲ್ಲ. ಆದರೆ ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಇಲ್ಲಿಗೆ ಸಮೀಪದ ಅಂಬರಹಳ್ಳಿ-ಮುಟ್ಟನಹಳ್ಳಿ ಬಳಿಯ ಸೂಳೆಕೆರೆ ಜೀರ್ಣೋದ್ದಾರ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸೂಳೆಕೆರೆಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದರು. ಅದರಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಶಾಶ್ವತವಾಗಿ ಅನುಕೂಲವಾಗಲಿದೆ. ಶೀಘ್ರವಾಗಿ ಕೆರೆ ಆಧುನೀಕರಣ ಕಾಮಗಾರಿಯನ್ನು ಮುಗಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದಲ್ಲದೆ ದೊಡ್ಡ ನಾಲೆಗಳ ಆಧುನೀಕರಣಕ್ಕೂ ಕ್ರಮಕೈಗೊಳ್ಳಲಾಗಿದ್ದು, ಇದರಿಂದ ಕೊನೆ ಭಾಗದ ನಾಲೆಗಳಿಗೂ ನೀರು ತಲುಪುವಂತಾಗುತ್ತದೆ. ಇದರಿಂದ ರೈತರು ಬೆಳೆಗಳನ್ನು ಬೆಳೆಯಲು ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಹಿಂದೆ ಇದೇ ಕೆರೆಯನ್ನು ಅಭಿವೃದ್ಧಿ ಮಾಡುವ ಕೆಲಸಕ್ಕೆ ಮುಂದಾದಾಗ ಮಳೆ ಬಂದ ಕಾರಣ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಗಲು ರಾತ್ರಿ ಹೂಳೆತ್ತುವಂತೆ ಸೂಚನೆ ನೀಡಲಾಗಿದೆ. ಅಕ್ಕಪಕ್ಕದ ಗ್ರಾಮದ ರೈತರು ಉಚಿತವಾಗಿ ಮಣ್ಣನ್ನು ತೆಗೆದುಕೊಂಡು ಹೋಗಬಹುದು. ರೈತರು ತರುವ ವಾಹನಕ್ಕೆ ಮಣ್ಣು ತುಂಬಿಸಿಕೊಡಲಾಗುವುದು. ಇನ್ನು ಜಮೀನು ಕಳೆದುಕೊಂಡ ರೈತರು ನೊಂದುಕೊಳ್ಳಬೇಡಿ. ಈ ಯೋಜನೆ ಸಾವಿರಾರೂ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ನಮ್ಮಿಂದಾಗುವ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಅಂಬರಹಳ್ಳಿ-ಮುಟ್ಟನಹಳ್ಳಿ ಗ್ರಾಮದ ಸಮೀಪದ ಸೂಳೆಕೆರೆ ಒತ್ತುವರಿಯಿಂದ ನಲುಗಿ ಹೋಗಿತ್ತು. ಪರಿಣಾಮ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಈ ನಡುವೆ ಶಾಸಕ ಕೆ.ಎಂ.ಉದಯ್ ಅವರ ಗಮನಕ್ಕೆ ತರಲಾಗಿತ್ತು. ಅದರಂತೆ ಯೋಜನೆಯೂ ರೂಪುಗೊಂಡಿತು. ಇದೀಗ ಮಹತ್ವದ ಕಾರ್ಯಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.
273 ಎಕರೆ ಒತ್ತುವರಿ: ಆಕಾರ್ ಬಂದ್ನಲ್ಲಿರುವ ಮಾಹಿತಿಯಂತೆ ಸೂಳೆಕೆರೆ ಬರೋಬರಿ 845 ಎಕರೆ 34 ಗುಂಟೆ ಇದೆ. ಆದರೆ ಹಲವು ವರ್ಷದ ಹಿಂದೆಯೇ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ತೆರವುಗೊಳಿಸಿದಾಗ 273 ಎಕರೆ 20 ಗುಂಟೆ ಜಾಗ ಕೆರೆಗೆ ಸೇರಿಕೊಂಡಿದೆ. ಒಟ್ಟಾರೆ 401.67 ಎಂಸಿಎಫ್ಟಿ(ಮಿಲಿಯನ್ ಕ್ಯೂಬಿಕ್ ಫೀಟ್) ಇದೆ. ಆದರೆ ಪ್ರಸ್ತುತ 285.45 ಎಂಸಿಎಫ್ಟಿ ಮಾತ್ರ ಸಂಗ್ರಹವಾಗುತ್ತಿತ್ತು. ಕೆರೆಯ ಸುತ್ತಳತೆ 12.50 ಕಿ.ಮೀ ಇದ್ದು, ಏರಿಯ ಉದ್ದ 1.10 ಕಿ.ಮೀ ಹಾಗೂ ಕೆರೆಯ ಕೋಡಿ ಉದ್ದ 110 ಮೀ ಇದೆ.
ಕೊಳಚೆ ನೀರು ಬರದಂತೆ ತಡೆ
ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ಸೂಳೆಕೆರೆ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಒಳಪಟ್ಟಿದೆ. ಈ ಮೂರು ಕ್ಷೇತ್ರದ ಶಾಸಕರು ಕೆರೆಯ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳಲ್ಲಿ ಮತ್ತು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಾಗ ರೈತರ ಹಿತದೃಷ್ಠಿಯಿಂದ ಹಣ ಬಿಡುಗಡೆಗೊಳಿಸಿದ್ದಾರೆ. ಮಂಡ್ಯ ನಗರದಿಂದ ಬರುವ ಕೊಳಚೆ ನೀರು ಸೂಳೆಕೆರೆಗೆ ಸೇರುತ್ತಿರುವುದರಿಂದ ಈ ಭಾಗದ ರೈತರು ಬಹಳಷ್ಟು ಭಾರಿ ಬೇಸರಗೊಂಡಿದ್ದಾರೆ. ಕೊಳಚೆ ನೀರು ಬರದಂತೆ ಮನವಿ ಸಲ್ಲಿಸಿದ್ದರು. ಇದನ್ನು ತಿಳಿದು 32 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಡ್ಯ ನಗರದಿಂದ ಬೇರೊಂದು ನಾಲೆಯ ಮೂಲಕ ಮಂಡ್ಯದ ಕೊಳಚೆ ನೀರನ್ನು ಹರಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ಶೀಘ್ರವಾಗಿ ಕಾಮಗಾರಿ ಮುಗಿಸಿ ಕೊಳಚೆ ನೀರು ಬರದಂತೆ ತಡೆಯಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಕೆರೆಯ ಅಚ್ಚುಕಟ್ಟು ಪ್ರದೇಶ 6,630 ಎಕರೆ ಇದೆ. ಕೆರೆಯ ಅಂಗಳಕ್ಕೆ ಅಂಬರಹಳ್ಳಿ, ಮಾದರಹಳ್ಳಿ, ಶಿಂಗಟಗೆರೆ, ಹೆಮ್ಮಿಗೆ, ಕನ್ನಲಿ ಗ್ರಾಮ ಸೇರುತ್ತದೆ. ದೊಡ್ಡಕೆರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತರ ಮನವಿಗೆ ಸ್ಪಂದಿಸಿದ ಶಾಸಕ ಕೆ.ಎಂ.ಉದಯ್, ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ್ದಾರೆ. ಅಂದಾಜು 90 ಕೋಟಿ ರೂ ವೆಚ್ಚದಲ್ಲಿ ಒಟ್ಟಾರೆ ಕೆರೆ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ಪೈಕಿ 34 ಕೋಟಿ ರೂ ವೆಚ್ಚದಲ್ಲಿ ಹೂಳು ತೆಗೆಯುವುದು, ಪೂರಕ ಕಾಲುವೆಗಳ ಅಭಿವೃದ್ಧಿ, ಏರಿಯ ಅಭಿವೃದ್ಧಿ, ಗಡಿ ಅಭಿವೃದ್ಧಿ, ಹೆಬ್ಬಳ ಹಳ್ಳಕ್ಕೆ 450 ಮೀ ತಡೆಗೋಡೆ ನಿರ್ಮಾಣ ಹಾಗೂ ಸೌಂದರೀಕರಣ ಕಾಮಗಾರಿ ಮಾಡಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಯಿಂದ ಈ ಭಾಗದಲ್ಲಿ ಜಲಕ್ರಾಂತಿಯಾಗಲಿದೆ. ಮಾತ್ರವಲ್ಲದೆ ಕೃಷಿ ಚಟುವಟಿಕೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ.
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, 1862 ರಲ್ಲಿ ಕೊಪ್ಪ ಹೋಬಳಿಯ ತಗ್ಗಹಳ್ಳಿ ಬಳಿ ನಾಲೆಗಳನ್ನು ನಿರ್ಮಿಸಿ ವಿದ್ಯುತ್ಚ್ಚಕ್ತಿ ತಯಾರು ಮಾಡಲು ಯೋಜನೆ ರೂಪಿಸಾಗಿತ್ತು. ಅದಾದ ನಂತರ 1911 ರಲ್ಲಿ 320 ಕಿ.ಮೀ ವ್ಯಾಪ್ತಿಯಲ್ಲಿ ಕೆಆರ್ಎಸ್ ಅಣೆಕಟ್ಟೆಯನ್ನು ಕಟ್ಟಲು ಅಂದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲು ಹಾಕಿದ್ದರು. ಈ ಫಲಶೃತಿಯಾಗಿ ಜಿಲ್ಲೆಯ 1082 ಹೆಕ್ಟೇರ್ನಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಇವರನ್ನು ಎಂದಿಗೂ ಮರೆಯುವಂತಿಲ್ಲ ಎಂದು ತಿಳಿಸಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚಲುವರಾಜು, ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ಬಾಬು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಬಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಕಿಸಾನ್ ರೈತ ಸಂಘದ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ, ರೈತ ಮುಖಂಡ ಬೋರಾಪುರ ಶಂಕರೇಗೌಡ, ಚಾಂಷುಗರ್ ಉಪಾಧ್ಯಕ್ಷ ಆರ್.ಮಣಿ, ಕದಲೂರು ರಾಮಕೃಷ್ಣ, ರಾಮಲಿಂಗಣ್ಣ, ದಾಸೇಗೌಡ, ಅಜ್ಜಹಳ್ಳಿ ರಾಮಕೃಷ್ಣ, ಮಮತಾ, ಮುಟ್ಟನಹಳ್ಳಿ ಮೂಲೆಹಟ್ಟಿ ಚಂದ್ರಶೇಖರ್, ಮಾದರಹಳ್ಳಿ ಈರಣ್ಣ, ಪ್ರೊ.ಬೋರೇಗೌಡ ಇತರರಿದ್ದರು.



ಕೆಲವರು ಬರೀ ಮಾತನಾಡುತ್ತಾರೆಯೇ ಹೊರತು ಅಭಿವೃದ್ಧಿ ಕೆಲಸ ಮಾಡಲ್ಲ. ಆದರೆ ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

