ಗಣರಾಜ್ಯೋತ್ಸವದ ಅಂಗವಾಗಿ ಹಾಗೂ ಮಂಡ್ಯದಲ್ಲಿ ಶಾಂತಿಸೌಹಾರ್ದತೆ ಮತ್ತು ಭ್ರಾತೃತ್ವದ ಸಂದೇಶ ಸಾರುವ ಸಂಕೇತವಾಗಿ ಇದೇ ಭಾನುವಾರ ಜ.25ರಂದು ಮಂಡ್ಯದ ಈದ್ಗಾ ಮೈದಾನದಲ್ಲಿ ಹಿಂದೂ-ಮುಸ್ಲಿಂರ ವಾಲಿಬಾಲ್ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ.
ಮಂಡ್ಯದ ಮದರಸ ಫಕ್ರುಲ್ ಲೂಮ್ ನೋಮಾನಿಯಾ ಅರೇಬಿಕ್ ಕಾಲೇಜ್ ಸಹಯೋಗದಲ್ಲಿ ಮಂಡ್ಯನಗರದ ಶಂಕರಮಠದಲ್ಲಿರುವ ಈದ್ಗಾ ಮೈದಾನದಲ್ಲಿ ಈ ಪಂದ್ಯಾವಳಿಯನ್ನ ಆಯೋಜಿಸಲಾಗಿದ್ದು, ಕಾಲೇಜಿನ ಮುಖ್ಯಸ್ಥರಾದ ಮುಫ್ತಿ ರಿಜ್ವಾನ್ ಅಹಮದ್ ಹಾಗೂ ನಗರಸಭೆ ಸದಸ್ಯೆ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಡ್ಯದಲ್ಲಿ ಇತ್ತೀಚೆಗೆ ಕೋಮು ಸಂಘರ್ಷ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅದನ್ನ ಹೋಗಲಾಡಿಸಲು ಹಾಗೂ ಎಲ್ಲರಲ್ಲೂ ಶಾಂತಿಸೌಹಾರ್ದತೆ ಮತ್ತು ಭ್ರಾತೃತ್ವದ ಸಂದೇಶ ಸಾರುವ ಸಂಕೇತವಾಗಿ ಈ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ.
ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಒಟ್ಟಿಗೆ ಸೇರಿ ಎರಡು ತಂಡಗಳನ್ನ ಸಂಘಟಿಸಿ, ವಾಲಿಬಾಲ್ ಪಂದ್ಯಾವಳಿಯನ್ನ ಏರ್ಪಡಿಸಲಾಗಿದೆ. ಈ ವಾಲಿಬಾಲ್ ಟೂರ್ನಿಯ ಮೂಲಕ ಜಿಲ್ಲೆಯಲ್ಲಿ ಶಾಂತಿಸೌಹಾರ್ದತೆ ಮತ್ತು ಭ್ರಾತೃತ್ವ, ಸಾಮರಸ್ಯದ ಸಂದೇಶ ಸಾರುವ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗುತ್ತಿದೆ ಎಂದು ಪಂದ್ಯಾವಳಿ ಆಯೋಜಕರಾದ ಮುಫ್ತಿ ರಿಜ್ವಾನ್ ಅಹಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




