Monday, November 23, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್‌ ಸರ್ಕಾರದ ಶಕ್ತಿ ಮತ್ತು ಅನ್ನ ಭಾಗ್ಯ ಯೋಜನೆ ಯಶಸ್ವಿ : ದಿನೇಶ್ ಗೂಳಿಗೌಡ ಸಂತಸ

ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗಳಾದ ಶಕ್ತಿ ಮತ್ತು ಅನ್ನ ಭಾಗ್ಯ ಯೋಜನೆ ಜಿಲ್ಲೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈವರೆಗಿನ ಟಿಕೆಟ್ ಮೌಲ್ಯದ ಪ್ರಮಾಣ 16 ಕೋಟಿ 27 ಲಕ್ಷದ 31 ಸಾವಿರ ರೂಪಾಯಿ ಆಗಿದ್ದು, ಅನ್ನಭಾಗ್ಯ ಯೋಜನೆಯಡಿ 3,99,965 ಕುಟುಂಬಗಳಿಗೆ 22.8 ಕೋಟಿ ರೂಪಾಯಿ ನೇರ ನಗದು ವರ್ಗಾವಣೆಯ ಬಾಗಿದ. ಬಡ ಮತ್ತು ಮಧ್ಯಮ ‌ವರ್ಗದ ಜನರು ಇದರ ನೇರ ಫಲಾನುಭವಿಗಳಗಿದ್ದು ಬೆಲೆ ಏರಿಕೆಯಿಂದ ಬಸವಳಿದಿದ್ದ‌‌ ಜನರ ಪಾಲಿಗೆ ಜನಪರ ಯೋಜನೆಯ ಮೂಲಕ ಬದುಕಿಗೆ ಆಸರೆ ಕಲ್ಪಿಸಿದೆ‌ ಎಂದಿದ್ದಾರೆ.

ಇನ್ನಿತರ ಯೋಜನೆಗಳಿಗೂ ಸಹ ಮಂಡ್ಯದಲ್ಲಿ ಸ್ಪಂದನೆ ದೊರೆತಿದ್ದು ಗೃಹಜ್ಯೋತಿ ಯೋಜನೆಗೆ 3,26,810 ಕುಟುಂಬದಿಂದ ನೋಂದಣಿಯಾಗಿದೆ ಮತ್ತು ನಿರಂತರ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಮಹಿಳೆಯರಿಗೆ ನವಚೇತನ ನೀಡಿ, ವನಿತೆಯರನ್ನು ಸಬಲೀಕರಣಗೊಳಿಸುವ, ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಥಮವಾಗಿ ಜಾರಿಗೆ ತಂದ “ಶಕ್ತಿ” ಯೋಜನೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಇದರಿಂದ ರಾಜ್ಯದಲ್ಲಿ ಮಹಿಳೆಯರಿಗೆ ಮನೆ‌ಯಿಂದ ಹೊರಬಂದು ದೈನಂದಿನ‌ ಬದುಕಿನಲ್ಲಿ ಕುಟುಂಬಸ್ಥರ ಜೊತೆ ಬೆರೆತು ಉಲ್ಲಾಸದ ಬದುಕು ಸವೆಸಲು ಸಹಕಾರಿಯಾಗಿದೆ. ಉದ್ಯೊಗಸ್ಥ ಮಹಿಳೆಯರ ಜೊತೆ ಗೃಹಿಣಿಯರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ತೀರ್ಥ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಿ ದೈವ ಕೃಪೆ ಪಡೆದು ಸಂಬಂಧಿಕರ ಮನೆಗೆ ತೆರಳಿ ಸಂಭಂದ ವೃದ್ಧಿಸಿ ಕೊಳ್ಳಲು ಶಕ್ತಿ ಯೋಜನೆ ಬಲ ತಂದಿದೆ.

ಇದರಿಂದ ನಮ್ಮ ಮಂಡ್ಯ ಜಿಲ್ಲೆಯ ಮಹಿಳೆಯರಿಗೂ ಸಾಕಷ್ಟು ಅನುಕೂಲವಾಗಿದ್ದು, ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 47.92 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು, ಇದರ ಟಿಕೆಟ್ ಮೌಲ್ಯ 16 ಕೋಟಿ 27 ಲಕ್ಷದ 31 ಸಾವಿರ ರೂಪಾಯಿ ಮೌಲ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಪರವಾಗಿ ನಮ್ಮ ಕಾಂಗ್ರೆಸ್ ಸರ್ಕಾರ ಸದಾ ಇದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಸ್ಥಳೀಯ ಸಂಸ್ಥೆಯಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.

ಸರ್ಕಾರದ ಈ ಉಚಿತ ಬಸ್ ಪ್ರಯಾಣದ ಯೋಜನೆ ಬಗ್ಗೆ ಹಲವಾರು ಟೀಕೆ, ಟಿಪ್ಪಣಿಗಳು ಬಂದವಾದರೂ ಆ ಎಲ್ಲವೂ ವಿರೋಧ ಮಾಡಲು ಮಾತ್ರ ಎಂಬುದನ್ನು ನಾಡಿನ ಜನತೆ ಸಾಬೀತುಪಡಿಸಿರುವುದು ಈಗ ನಡೆಸಿರುವ ಪ್ರಯಾಣದಿಂದಲೇ ಗೊತ್ತಾಗುತ್ತದೆ. ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ತಮ್ಮ ಜೀವಿತಾವಧಿಯನ್ನು ಸವೆಸಿರುವ ಅದೆಷ್ಟೋ ಮಹಿಳೆಯರು ಇಂದು ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಅದರ ಮೂಲಕ ಅವರ ಮಾನಸಿಕ ಸ್ಥೈರ್ಯ, ಮನೋಬಲವೂ ಹೆಚ್ಚಿದೆ. ಇನ್ನು ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗಾವಕಾಶಗಳು ಇದರಿಂದ ವಿಸ್ತಾರವಾಗಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಉಚಿತವಾಗಿಯೇ ಬಸ್ ಪ್ರಯಾಣ ಮಾಡುವುದರಿಂದ ಅವರಿಗೆ ದುಡಿಮೆಯ ಉಳಿತಾಯವಾಗುತ್ತದೆ. ಈ ಉಳಿತಾಯವು ಮತ್ತೊಂದು ಹೂಡಿಕೆಗೆ ಕಾರಣವಾಗಬಹುದು, ಇಲ್ಲವೇ ಅವರ ಅಗತ್ಯತೆಗಳ ಖರ್ಚಿಗೂ ಕಾರಣವಾಗುತ್ತದೆ. ಹೀಗಾಗಿ ಪರೋಕ್ಷವಾಗಿ ಆರ್ಥಿಕ ವಹಿವಾಟಿಗೆ ಈ ಶಕ್ತಿ ಯೋಜನೆಯು ಶಕ್ತಿ ತುಂಬಿದಂತಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನ, ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದಾರೆ. ಇದರಿಂದ ಅಲ್ಲಿನ ಆದಾಯದಲ್ಲಿ ಸಹ ಗಣನೀಯವಾಗಿ ಏರಿಕೆಯಾಗಿದೆ. ಅಂದರೆ ಇದು ನಿಜಕ್ಕೂ ಸಂತೋಷದಾಯಕ ವಿಚಾರವಾಗಿದೆ. ಸರ್ಕಾರದ ಒಂದು ಯೋಜನೆಯು ಹತ್ತಾರು ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಾಯ ಮಾಡುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಮಂಡ್ಯ ಜಿಲ್ಲೆಯ ಮಹಿಳೆಯರು ಈ ಯೋಜನೆಯ ಸದುಪಯೋಗವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತಾಗಲಿ. ಮಹಿಳೆಯರ ಸಾಧನೆಗೆ ಮೆಟ್ಟಿಲಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಲು ನನಗೆ ಬಹಳವೇ ಸಂತೋಷವಾಗುತ್ತಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.

ಅನ್ನಭಾಗ್ಯದ ಹಣವೂ ಖಾತೆಗೆ ಜಮೆ
ಇನ್ನು ಅನ್ನಭಾಗ್ಯದ ಯೋಜನೆ ಬಗ್ಗೆ ಹೇಳುವುದಾದರೆ ಇದೂ ಸಹ ನಮ್ಮ ಮಂಡ್ಯ ಜಿಲ್ಲೆಯ ಜನತೆಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಇದುವರೆಗೆ ಮಂಡ್ಯ ಜಿಲ್ಲೆಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಒಟ್ಟು 3,99,965 ಕುಟುಂಬಗಳಿಗೆ 22.8 ಕೋಟಿ ರೂಪಾಯಿ (22,08,81,510 ರೂ.) ಹಣವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಹಣವನ್ನು ತಲುಪಿಸಿದ ತೃಪ್ತಿ ನಮ್ಮ ಸರ್ಕಾರವಿದೆ. ಈ ಮೂಲಕ ಹಸಿದವರ ಪರ ನಾವಿದ್ದೇವೆ ಎಂಬುದನ್ನೂ ತೋರಿಸಿಕೊಟ್ಟಿದ್ದೇವೆ ಎಂದು ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ