ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧುರ ಮಂಡ್ಯ ಲಯನ್ಸ್ ವತಿಯಿಂದ ಸೋಮವಾರ ನೋಟ್ ಬುಕ್ ವಿತರಣೆ ಮಾಡಲಾಯಿತು.
ಮಧುರ ಮಂಡ್ಯ ಲಯನ್ಸ್ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದಾನಿ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್.ವಿ.ನಟರಾಜು ನೋಟ್ ಬುಕ್ ಹಾಗೂ ಶಾಲೆಗೆ ಅಗತ್ಯವಿದ್ದ ಸೌಂಡ್ ಸಿಸ್ಟಮ್ ಅನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಧುರ ಮಂಡ್ಯ ಲಯನ್ಸ್ ಅಧ್ಯಕ್ಷ ಸಿ.ತ್ಯಾಗರಾಜು, ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ.ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮುಖಾಂತರ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಗೆ ಉತ್ತಮ ಸಂಬಳ ಕೊಡುತ್ತಾರೆ.ಅದ್ದರಿಂದ ಶಿಕ್ಷಕರು ಮಕ್ಕಳಿಗೆ ಇನ್ನೂ ಹೆಚ್ಚಿನ ಗಮನಹರಿಸಿ ಉತ್ತಮ ಶಿಕ್ಷಣ ನೀಡಬೇಕೆಂದು ಮನವಿ ಮಾಡಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್.ವಿ. ನಟರಾಜ್ ಅವರು ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಸೌಂಡ್ ಸಿಸ್ಟಮ್ ಕೊಡಿಸಿದ್ದಾರೆ.ಅವರಿಗೆ ಲಯನ್ಸ್ ಸಂಸ್ಥೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.ಸಮಾಜದಲ್ಲಿ ಇಂತಹ ದಾನಿಗಳ ಸಂಖ್ಯೆ ಹೆಚ್ಚಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಸೌಂಡ್ ಸಿಸ್ಟಮ್ ಕೊಡುಗೆ ನೀಡಿದ ದಾನಿ ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್.ವಿ.ನಟರಾಜುಅವರನ್ನು ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಧುರ ಮಂಡ್ಯ ಲಯನ್ಸ್ ಕಾರ್ಯದರ್ಶಿ ಸಿದ್ದರಾಮೇಗೌಡ,ಖಜಾಂಚಿ ದೇವೇಗೌಡ,ನಿರ್ದೇಶಕರಾದ ರಘು, ಸಂಪತ್,ನಂದೀಶ್,ಊರಿನ ಯಜಮಾನರಾದ ಮಂಚಯ್ಯ,ಈರಣ್ಣ ಸೇರಿದಂತೆ ಮತ್ತಿತರರಿದ್ದರು.




